ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ರದ್ದುಪಡಿಸುವ ವಿಷಯದ ಕುರಿತು ಮನವಿಗಳನ್ನು ಸಂವಿಧಾನ ಪೀಠವು ಆಲಿಸಲಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಐದು ನ್ಯಾಯಾಧೀಶರ ಸಂವಿಧಾನ ಪೀಠವು ಮನವಿಗಳನ್ನು ಆಲಿಸಲಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ವಿಚಾರಣೆ ಪ್ರಾರಂಭವಾಗಲಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೂ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ಕೋರಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 14 ಅರ್ಜಿಗಳನ್ನು ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಲಾಗಿದೆ.  


ಸುಪ್ರೀಂ ಕೋರ್ಟ್ ಮೊದಲಿಗೆ, ಜಾಮಿಯಾ ಮಿಲಿಯಾ ಕಾನೂನು ವಿದ್ಯಾರ್ಥಿಯು ಸಲ್ಲಿಸಿದ ಮನವಿಯನ್ನು ಆಲಿಸಿತು, ಅವರು ಪೋಷಕರನ್ನು ಭೇಟಿ ಮಾಡಲು ಕಾಶ್ಮೀರದ ಅನಂತ್ ನಾಗ್ ಗೆ ಪ್ರಯಾಣಿಸಲು ಅನುಮತಿ ಕೋರಿದರು. ಇದಕ್ಕೆ ಅವನಿಗೆ ಸುಪ್ರೀಂಕೋರ್ಟ್ ಪ್ರಯಾಣಿಸಲು ಅವಕಾಶ ನೀಡಿತು ಮತ್ತು ಅವನ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿತು. ಅಲ್ಲದೆ ದೆಹಲಿಗೆ ವಾಪಸ್ ಬಂದ ನಂತರ ವರದಿ ನೀಡುವಂತೆ ಸುಪ್ರೀಂ ಕೇಳಿದೆ. 


ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಸಲ್ಲಿಸಿದ್ದ ಮತ್ತೊಂದು ಮನವಿಯವನ್ನು ವಿಚಾರಣೆ ನಡೆಸಿ, ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಶಾಸಕ ಮೊಹಮ್ಮದ್ ಯೂಸುಫ್ ತಾರಿಗಾಮಿಯನ್ನು ಭೇಟಿಯಾಗಲು  ಅವರಿಗೆ ಅವಕಾಶ ಕಲ್ಪಿಸಿದೆ.ಆದರೆ ಅವರು ಬೇರೆ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಹಾಗಿಲ್ಲ ಎಂದು ನಿರ್ದೇಶನ ನೀಡಿದೆ. ಇದಕ್ಕೂ ಮೊದಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಒಬ್ಬ ನಾಗರಿಕನು ಹೋಗಲು ಬಯಸಿದರೆ, ದೇಶದ ಯಾವುದೇ ಭಾಗವನ್ನು ಪ್ರವೇಶಿಸುವ ಹಕ್ಕಿದೆ ಎಂದು ಹೇಳಿದರು. 


370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಪ್ರಸ್ತುತ ಭದ್ರತಾ ವ್ಯಾಪ್ತಿಯಲ್ಲಿದೆ. ಈ ಪ್ರದೇಶದ ಕೆಲವು ಭಾಗಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದ್ದರೂ, ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ, ಪ್ರಯಾಣದ ನಿರ್ಬಂಧಗಳ ಹೊರತಾಗಿ, ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಆದಾಗ್ಯೂ, ಲ್ಯಾಂಡ್‌ಲೈನ್ ಸೇವೆಗಳನ್ನು ಪುನಃ ಸ್ಥಾಪಿಸಲಾಗಿದೆ.


ಆಗಸ್ಟ್ 24 ರಂದು ಕಾಂಗ್ರೆಸ್ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷದ ನಾಯಕರ ನಿಯೋಗವು ಶ್ರೀನಗರಕ್ಕೆ ಪ್ರಯಾಣ ಬೆಳೆಸಿತು.ಆದರೆ ಅವರಿಗೆ ವಿಮಾನ ನಿಲ್ದಾಣದಿಂದ ಹೊರ ಹೋಗಲು ಅವಕಾಶ ನೀಡಲಿಲ್ಲ, ಅವರು ದೆಹಲಿಗೆ ವಾಪಸ್ ಆದಾಗ ಸುದ್ದಿಗಾರರೊಂದಿಗೆ ಮಾತನಾಡಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಹಜವಾಗಿದ್ದರೆ ಆಗಿದ್ದರೆ, ಈ ಪ್ರದೇಶಕ್ಕೆ ಭೇಟಿ ನೀಡಲು ಅವರಿಗೆ ಏಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದರು 


ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಯಾವುದೇ ದೊಡ್ಡ ಹಿಂಸಾಚಾರ ಅಥವಾ ಪ್ರತಿಭಟನೆ ನಡೆದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ದೃಡಪಡಿಸಿದ್ದಾರೆ. ಪರಿಸ್ಥಿತಿ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದೆ ಎಂದು ಸರ್ಕಾರ ಭರವಸೆ ನೀಡಿದೆ.