ನಾಳೆಯಿಂದ ಸುಪ್ರೀಂಕೋರ್ಟ್ನಲ್ಲಿ ಅಯೋಧ್ಯೆ ವಿವಾದ ಪ್ರಕರಣ ವಿಚಾರಣೆ
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿ ಆದೇಶಿಸಿತ್ತು. ಅದರಂತೆ ಇದೀಗ ಜನವರಿ 4ರಿಂದ ಅರ್ಜಿಗಳ ವಿಚಾರಣೆ ಪ್ರಾರಂಭವಾಗಲಿದೆ.
ನವದೆಹಲಿ: ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ(ಜ.4)ಯಿಂದ ಆರಂಭಿಸಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರನ್ನೊಳಗೊಂಡ ಪೀಠ ಅಯೋಧ್ಯೆ ವಿವಾದದ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲಿದೆ.
ಕಳೆದ ಅಕ್ಟೋಬರ್'ನಲ್ಲಿ ಅಯೋಧ್ಯೆ ವಿವಾದದ ವಿಚಾರಣೆ ವಿಳಂಬ ಹಾಗೂ ತ್ವರಿತಗತಿಯ ವಿಚಾರಣೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ "ನ್ಯಾಯಾಲಯಕ್ಕೆ ಯಾವ ವಿಚಾರ ಎಷ್ಟು ಪ್ರಮುಖ ಎನ್ನುವುದು ತಿಳಿದಿದೆ" ಎಂದು ಹೇಳಿತ್ತು. ಅಲ್ಲದೆ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಜನವರಿಗೆ ಮುಂದೂಡಿ ಆದೇಶಿಸಿತ್ತು. ಅದರಂತೆ ಇದೀಗ ಜನವರಿ 4ರಿಂದ ಅರ್ಜಿಗಳ ವಿಚಾರಣೆ ಪ್ರಾರಂಭವಾಗಲಿದೆ.
2010ರಲ್ಲಿ ಈ ವಿವಾದದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಈ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖರ ಈ ಮೂವರಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಾಕಷ್ಟು ಮೇಲ್ಮನವಿಗಳು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ಅಂತಿಮ ಹಂತದ ವಿಚಾರಣೆ ನಡೆಸಬೇಕಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮುರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ಪೀಠ ವಿಚಾರಣೆಯನ್ನು ಜನವರಿಗೆ ಮುಂದೂಡಿತ್ತು.
ವಿವಾದ ಸಂಬಂಧದ ವಿಚಾರಣೆ ಜನವರಿಗೆ ಮುಂದೂಡಲ್ಪಟ್ಟ ಬೆನ್ನಲ್ಲೇ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ಕೇಂದ್ರದ ಮೇಲೆ ಒತ್ತಡಗಳು ಹೆಚ್ಚಾಗುತ್ತಾ ಬಂದಿದ್ದವು. ಅಲ್ಲದೆ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನು ಜಾರಿ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದವು. ಈ ವಿಚಾರ ಬಿಜೆಪಿ ಹಾಗೂ ಶಿವಸೇನೆ ನಡುವೆ ವಾಕ್ಸಮರಕ್ಕೆ ಸಹ ಕಾರಣವಾಗಿತ್ತು.
ಈ ಬೆನ್ನಲ್ಲೇ, ಸುಪ್ರೀಂಕೋರ್ಟ್'ನಲ್ಲಿ ರಾಮಮಂದಿರ ವಿವಾದ ಕುರಿತು ಎಲ್ಲಾ ಪ್ರಕ್ರಿಯೆಗಳೂ ಪೂರ್ಣಗೊಂಡ ನಂತರವಷ್ಟೇ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.