ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಶುಕ್ರವಾರ(ಡಿ.14) ಮಹತ್ವದ ತೀರ್ಪು ಪ್ರಕಟಿಸಲಿದೆ. 


COMMERCIAL BREAK
SCROLL TO CONTINUE READING

ನವೆಂಬರ್ 14ರಂದು ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಪೀಠ ಡಿಸೆಂಬರ್ 14ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. 


ವಕೀಲರಾದ ಪ್ರಶಾಂತ್​ ಭೂಷಣ್​, ಎಂಎಲ್ ಶರ್ಮಾ, ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್​ ಶೌರಿ ಅವರು ರಫೇಲ್​ ವಿಮಾನ ಖರೀದಿ ಪ್ರಕ್ರಿಯೆ ಕುರಿತು ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ, ಎಎಪಿ ಮುಖಂಡ ಸಂಜಯ್ ಸಿಂಗ್ ಅವರೂ ಕೂಡ ಕೋರ್ಟ್ ನಿಗಾದಲ್ಲಿ ತನಿಖೆಗೆ ಆಗ್ರಹಿಸಿದ್ದರು. 


ಯಶ್ವಂತ್‌ ಸಿಂನ್ಹ ಅವರ ಪರ ವಕೀಲ ಪ್ರಶಾಂತ್ ಭೂಷಣ್‌, ಕೇಂದ್ರ ಸರ್ಕಾರ ರಫೇಲ್‌ ವಿಮಾನ ಖರಿದಿಯಲ್ಲಿ ಆಂತರಿಕ ಒಪ್ಪಂದ ಮಾಡಿಕೊಂಡಿದೆ. ರಫೇಲ್‌ ದರ ಒಪ್ಪಂದದಲ್ಲಿ ಆದ ಬದಲಾವಣೆಗಳು ಸ್ವತಃ ರಕ್ಷಣಾ ಸಚಿವರಿಗೇ ತಿಳಿದಿರಲಿಲ್ಲ. ಫ್ರಾನ್ಸ್‌ ಮಾಜಿ ಅಧ್ಯಕ್ಷರು ರಫೇಲ್‌ ಡೀಲ್‌ ಬಗ್ಗೆ ಮಾತನಾಡಿದ್ದ ವಿಚಾರಗಳನ್ನು ಪ್ರಸ್ತಾಪಿಸಿ, ಒಪ್ಪಂದವನ್ನು ಪ್ರಧಾನಿ ಮೋದಿಯೇ ನೇತೃತ್ವ ವಹಿಸಿದ್ದರು ಎಂದು ಆರೋಪಿಸಿದ್ದರು. 


ಸರಕಾರದ ಪರ ವಾದ ಮಂಡಿಸಿದ್ದ ಅಟಾರ್ನಿ ಜನರಲ್ ವೇಣುಗೋಪಾಲ್, ಬೆಲೆ ವಿವರಗಳು ಸೀಲ್ ಮಾಡಲಾದ ಲಕೋಟೆಯಲ್ಲಿ ಈಗಾಗಲೇ ಕೋರ್ಟ್‌ಗೆ ಸಲ್ಲಿಸಲಾಗಿದೆ. ಆದರೆ ಅಂತರ ಸರ್ಕಾರಿ ಒಪ್ಪಂದದ ಅನುಸಾರ ಅದನ್ನು ಬಹಿರಂಗಪಡಿಸುವಂತಿಲ್ಲ ಎಂದು ವಾದಿಸಿದ್ದರು.