ನವದೆಹಲಿ: ಜಮ್ಮು ಕಾಶ್ಮೀರ ನಾಗರೀಕರಿಗೆ ನೀಡಲಾಗಿರುವ ವಿಶೇಷಾಧಿಕಾರ ಕಲಂ 35-ಎ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. 


COMMERCIAL BREAK
SCROLL TO CONTINUE READING

ಕಲಂ 35-ಎ ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು. ಇನ್ನು ಕಲಂ 35-ಎ ವಿಚಾರಣೆಗೆ ಸುಪ್ರೀಂ ಕೋರ್ಟ್ ಮುಂದಾಗಿರುವುದನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿ ಸಂಘಟನೆ ಕರೆ ನೀಡಿದ್ದ ಎರಡು ದಿನಗಳ ಬಂದ್ ಗೆ ಭಾನುವಾರ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.


ವಿಚಾರಣೆ ಮುಂದೂಡಲು ರಾಜ್ಯಪಾಲರ ಮನವಿ:
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿ 35-ಎರ ಸಿಂಧುತ್ವವನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯ ಸೋಮುವಾರದ ವಿಚಾರಣೆಯನ್ನು ಮುಂದೂಡುವಂತೆ ರಾಜ್ಯದ ವಿಚಾರಣಾ ಮಂಡಳಿ ಮೂಲಕ ರಾಜ್ಯಪಾಲ ಎನ್.ಎನ್. ವೋಹ್ರಾ ಮನವಿ ಮಾಡಿದ್ದು, ಈ ವಿಚಾರವಾಗಿ ಈಗ ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ಗೆ ಅರ್ಜಿಯನ್ನು ಸಲ್ಲಿಸಿದೆ. ಅರ್ಜಿಯಲ್ಲಿ ಮುಂಬರುವ ಪಂಚಾಯತ್ ಮತ್ತು ನಗರ ಸ್ಥಳೀಯ ಮಂಡಳಿ ಮತ್ತು ಪುರಸಭೆಯ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವುದರಿಂದ ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.


ಏನಿದು ಕಲಂ 35-ಎ?
ಜಮ್ಮು ಕಾಶ್ಮೀರದ ನಾಗರೀಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದರ ಬಗ್ಗೆ ಕಲಂ 35-ಎ ತಿಳಿಸುತ್ತದೆ. ಕಲಂ 35-ಎ ಪ್ರಕಾರ, ಆ ರಾಜ್ಯದ ಶಾಶ್ವತ ನಿವಾಸಿಗಳು ಅಂದರೆ ಸ್ಥಳೀಯ ನಿವಾಸಿಗಳನ್ನು ಬಿಟ್ಟು, ಹೊರರಾಜ್ಯದವರು ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ ಖರೀದಿಸಲು ಅವಕಾಶವಿಲ್ಲ. ಅಲ್ಲದೆ, ಸರ್ಕಾರಿ ಕೆಲಸಗಳ ನೇಮಕಾತಿ, ವಿದ್ಯಾರ್ಥಿವೇತನ ಹಾಗೂ ಸಾರ್ವಜನಿಕ ಕಲ್ಯಾಣಾಭಿವೃದ್ಧಿ ಯೋಜನೆಗಳ ಲಾಭ ಪಡೆಯಲು ಸ್ಥಳೀಯರಷ್ಟೇ ಅರ್ಹರು. ಮೇ 14, 1954ರಲ್ಲಿ ರಾಷ್ಟ್ರಪತಿ ಆದೇಶದ ಮೇರೆಗೆ ಕಲಂ 35-ಎ ಸೇರ್ಪಡೆಯಾಗಿದ್ದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ಸಿಕ್ಕಿದೆ. ಈ ಕಲಂ ಸಂಸತ್ತಿನ ನಿರ್ಣಯದ ಮೂಲಕ ಸೇರ್ಪಡೆಯಾಗಿಲ್ಲ. 


ಅರ್ಜಿದಾರರ ವಾದವೇನು?
ದೇಶದ ಯಾವುದೇ ಭಾಗದಲ್ಲಿ ಆಸ್ತಿ ಹೊಂದುವುದು ಭಾರತದ ನಾಗರೀಕರ ಮೂಲಭೂತ ಹಕ್ಕಾಗಿದೆ. ಆದರೆ ಇದನ್ನು ಕಲಂ 35-ಎ ಉಲ್ಲಂಘಿಸುತ್ತದೆ. ದೇಶದ ಸಂವಿಧಾನಕ್ಕೆ ಸಂಸತ್ ನಲ್ಲಿ ಮಾತ್ರ ತಿದ್ದುಪಡಿ ತರಲು ಸಾಧ್ಯ. ಆದರೆ, ರಾಷ್ಟ್ರಪತಿಗಳ ವಿಶೇಷಾಧಿಕಾರ ಬಳಸಿ ಕಲಂ 35-ಎ ಅಧಿಸೂಚನೆ ಹೊರಡಿಸಲಾಗಿದೆ. ಈ ವಿಧಿ ಒಂದು ತಿದ್ದುಪಡಿ ಕೂಡ ಅಲ್ಲ ಎಂಬುದು ಅರ್ಜಿದಾರರ ವಾದವಾಗಿದ್ದು, ಕಲಂ 35-ಎ ಅನ್ನು ರದ್ದುಮಾಡುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದೆ.