ಹೃದಯ ಶಸ್ತ್ರ ಚಿಕಿತ್ಸೆಗಾಗಿ ಪಾಕ್ ಮಗುವಿನ ವೈದ್ಯಕೀಯ ವೀಸಾ ನೀಡಿದ ಸುಷ್ಮಾ ಸ್ವರಾಜ್
ಭಾರತದಲ್ಲಿ ಓಪನ್ ಹಾರ್ಟ್ ಸರ್ಜರಿಗಾಗಿ 7 ವರ್ಷ ಪ್ರಾಯದ ಪಾಕಿಸ್ತಾನಿ ಹುಡುಗಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಿಂದ ವೈದ್ಯಕೀಯ ವೀಸಾ.
ನವ ದೆಹಲಿ: ಭಾರತದಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಕರಾಚಿ ಮೂಲದ 7 ವರ್ಷ ವಯಸ್ಸಿನ ಬಾಲಕಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಾನವೀಯತೆ ದೃಷ್ಟಿಯಿಂದ ವೈದ್ಯಕೀಯ ವೀಸಾ ನೀಡಿದ್ದಾರೆ.
ಸ್ವರಾಜ್ ವೈದ್ಯಕೀಯ ಚಿಕಿತ್ಸೆಗಾಗಿ ಪಾಕಿಸ್ತಾನಿಗಳಿಗೆ ಸಹಾಯ ಹಸ್ತ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಪಾಕ್ ಮಗುವಿಗೆ ವೈದ್ಯಕೀಯ ವೀಸಾ ನೀಡಿದ್ದರು. ರೋಹನ್ ಎಂಬ ಲಾಹೋರ್ ನಿವಾಸಿಗೆ ಹೃದಯದಲ್ಲಿ ರಂಧ್ರವಿದ್ದ ಕಾರಣ ಶಸ್ತ್ರ ಚಿಕಿತ್ಸೆಗಾಗಿ ವೀಸಾ ನೀಡಲಾಗಿತ್ತು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪಾಕಿಸ್ತಾನಿ ಮಹಿಳೆ ಫೈಜಾ ತನ್ವೀರ್ ಕಳೆದ ಆಗಸ್ಟ್ ನಲ್ಲಿ ತನಗೆ ವೈದ್ಯಕೀಯ ವೀಸಾ ನೀಡುವಂತೆ ಟ್ವಿಟ್ಟರ್ ಮೂಲಕ ಸುಷ್ಮಾ ರಲ್ಲಿ ಮನವಿ ಮಾಡಿದ್ದರು. ಪಾಕಿಸ್ತಾನಿ ಪ್ರಜೆಗಳಿಗೆ ವೈದ್ಯಕೀಯ ವೀಸಾವನ್ನು ಭಾರತ ನೀಡಲಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದರು.
ಹೀಗೆ ಪಾಕಿಸ್ತಾನಿ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡುವ ಮೂಲಕ ಪಾಕ್ ಪ್ರಜೆಗಳ ಬಗೆಗೆ ಮೃದು ನಿಲುವನ್ನು ತಲೆದಿದ್ದರೂ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳನ್ನು ಸುಷ್ಮಾ ದೂಷಿಸಿದ್ದಾರೆ. "ಭಾರತವು ವೈದ್ಯರು, ವಿದ್ವಾಂಸರು, ಎಂಜಿನಿಯರ್ಗಳನ್ನು ತಯಾರಿಸುತ್ತಿದೆ. ಆದರೆ ನೀವು ಏನು ಭಯೋತ್ಪಾದಕರನ್ನು ತಯಾರಿಸುತ್ತಿದ್ದಿರಿ. ವೈದ್ಯರು ಸಾವಿನಿಂದ ಜನರನ್ನು ರಕ್ಷಿಸುತ್ತಾರೆ; ಭಯೋತ್ಪಾದಕರು ಜನರು ಮರಣ ಹೊಂದುವಂತೆ ಮಾಡುತ್ತಾರೆ" ಎಂದು ತಿಳಿಸಿದ್ದರು.