ಶ್ರೀಲಂಕಾ ದಾಳಿ: ಕೇರಳದಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ; ವಿಚಾರಣೆ ವೇಳೆ ಆತಂಕಕಾರಿ ಅಂಶ ಬಹಿರಂಗ!
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಅಬ್ದುಲ್ ರಶೀದ್ ಅಬ್ದುಲ್ಲಾ ಜೊತೆ ಸಂಪರ್ಕದಲ್ಲಿರುವುದಾಗಿ ಒಪ್ಪಿಕೊಂಡಿರುವ ರಿಯಾಸ್, ಆತನ ಆಡಿಯೋ ಕ್ಲಿಪ್ ಹಾಗೂ ವಿಡಿಯೋ ತುಣುಕುಗಳನ್ನು ನೋಡುತ್ತಿದ್ದೆ ಎಂದಿದ್ದಾನೆ.
ನವದೆಹಲಿ: ಶ್ರೀಲಂಕಾದಲ್ಲಿ ಐಎಸ್ಐಎಸ್ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಭಾರತ ಹಲವೆಡೆ ಕಟ್ಟೆಚ್ಚರ ವಹಿಸಿದೆ. ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ ಸ್ಪೋಟ ನಡೆಸಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಸೋಮವಾರ ಕೇರಳದಲ್ಲಿ ಬಂಧಿಸಿದೆ.
ಬಂಧಿತ ಆರೋಪಿಯನ್ನು ರಿಯಾಸ್ ಅಬೂಬಕರ್(29) ಎಂದು ಗುರುತಿಸಲಾಗಿದ್ದು, ಕೇರಳದ ಪಾಲಕ್ಕಾಡ್ ಮೂಲದವನು ಎನ್ನಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಆತಂಕಕಾರಿ ಅಂಶವೊಂದನ್ನು ಬಹಿರಂಗಪಡಿಸಿರುವ ಆತ, ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದ ಸರಣಿ ಬಾಂಬ್ ದಾಳಿಯ ರೂವಾರಿಯಾಗಿದ್ದ ನ್ಯಾಷನಲ್ ತೌಹೀದ್ ಜಮಾತ್ ಸಂಘಟನೆಯ ನಾಯಕ ಝಾಕಿರ್ ನಾಯ್ಕ್ ಅಲಿಯಾಸ್ ಝಹ್ರಾನ್ ಹಷಿಮ್ ನೀಡುತ್ತಿದ್ದ ಆದೇಶ ಹಾಗೂ ಅವರ ಭಾಷಣದ ವೀಡಿಯೋಗಳನ್ನು ತಾನು ಅನುಕರಿಸುತ್ತಿದ್ದಾಗಿ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕೇರಳದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾಗಿ ಹೇಳಿದ್ದಾನೆ.
ಇದೇ ಸಂದರ್ಭದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಅಬ್ದುಲ್ ರಶೀದ್ ಅಬ್ದುಲ್ಲಾ ಜೊತೆ ಸಂಪರ್ಕದಲ್ಲಿರುವುದಾಗಿ ಒಪ್ಪಿಕೊಂಡಿರುವ ರಿಯಾಸ್, ಆತನ ಆಡಿಯೋ ಕ್ಲಿಪ್ ಹಾಗೂ ವಿಡಿಯೋ ತುಣುಕುಗಳನ್ನ ನೋಡುತ್ತಿದ್ದೆ ಎಂದಿದ್ದಾನೆ. ಅಲ್ಲದೆ, ಸಿರಿಯಾದಲ್ಲಿದ್ದಾನೆ ಎನ್ನಲಾಗಿರುವ ಐಎಸ್ ಸಂಘಟನೆಯ ಶಂಕಿತ ಉಗ್ರ ಅಬ್ದುಲ್ ಖಾಯೂಮ್ ಅಲಿಯಾಸ್ ಅಬು ಖಾಲಿದ್ ಜೊತೆ ಆನ್ಲೈನ್ ಚಾಟ್ ಸಹ ಮಾಡಿರುವುದಾಗಿ ಹೇಳಿದ್ದಾನೆ. ಅಲ್ಲದೆ, ಇವರು ಭಾರತದಲ್ಲಿ ದಾಳಿ ನಡೆಸಲು ಪ್ರೇರೇಪಿಸುವಂತಹ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
2016ರ ಜೂನ್ ನಲ್ಲಿ ಕಾಸರಗೋಡಿನಿಂದ ಸುಮಾರು 15 ಮಂದಿ ಕಣ್ಮರೆಯಾಗಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಇವರಲ್ಲಿ 14 ಮಂದು ಆಫ್ಘಾನಿಸ್ತಾನದಲ್ಲಿ ಮತ್ತು ಓರ್ವ ಸಿರಿಯಾದಲ್ಲಿನ ಐಸಿಎಸ್ ಉಗ್ರ ಸಂಘಟನೆಗೆ ಸೇರಿರುವುದಾಗಿ ಮಾಹಿತಿ ದೊರೆತಿತ್ತು. ಅಬ್ದುಲ್ಲಾ ಆಫ್ಘಾನಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ 22 ಜನರ ಗುಂಪಿನ ನಾಯಕ ಎಂದು ಎನ್ನಲಾಗಿದೆ.
ಅಫ್ಘಾನಿಸ್ತಾನ ಮತ್ತು ಸಿರಿಯಾಕ್ಕೆ ಈಗಾಗಲೇ ವಲಸೆ ಬಂದ ಇತರರಲ್ಲಿ ಅಬ್ದುಲ್ ರಶೀದ್, ಅಷ್ಫಾಕ್ ಮಜೀದ್ ಮತ್ತು ಖಯೂಮ್ ಸೇರಿದಂತೆ ನಾಲ್ಕು ಆರೋಪಿಗಳೊಡನೆ ನಾಲ್ವರ ಗುಂಪು ಸಂಪರ್ಕ ಹೊಂದಿರುವ ಬಗ್ಗೆ ಈ ಹಿಂದೆಯೇ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ದೊರೆತಿತ್ತು ಎನ್ನಲಾಗಿದೆ. ಕೇರಳದ ಕಾಸರಗೋಡು ಮತ್ತು ಪಾಲಕ್ಕಾಡ್ ನ ಮೂರು ಸ್ಥಳಗಳಲ್ಲಿ ಭಾನುವಾರ ಎನ್ಐಎ ತನಿಖೆ ನಡೆಸಿತ್ತು.