ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಪ್ರಯತ್ನದಿಂದ ದೇಶದಲ್ಲಿ ಸ್ವಚ್ಚತೆ ಸಾಕಾರಗೊಂಡಿದೆ ಎಂದಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು 'ಸ್ವಚ್ಛ ಭಾರತ'ದ ಕುರಿತು ಮಹಾತ್ಮಾ ಗಾಂಧಿಯವರ ದೃಷ್ಟಿಕೋನಗಳನ್ನು ಬುಧವಾರ ಸ್ಮರಿಸಿದರು.


COMMERCIAL BREAK
SCROLL TO CONTINUE READING

"ಮಹಾತ್ಮ ಗಾಂಧಿಯವರ 150 ನೇ ಜನ್ಮದಿನದಂದು ನಾನು ಭಾರತೀಯ ನಾಗರಿಕರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ರಾಷ್ಟ್ರಕ್ಕೆ ಸ್ವಚ್ಛ ಭಾರತ್ ಮತ್ತು ಸ್ವಾಸ್ತ್ ಭಾರತ್ ಪ್ರಮಾಣವಚನ ಸ್ವೀಕರಿಸಿದ್ದರು. ಇಂದು ಸ್ವಚ್ಛತೆ ಜನರಿಗೆ ಅಭ್ಯಾಸವಾಗಿ ಮಾರ್ಪಟ್ಟಿದೆ. ಇಂದು ಇಡೀ ಜಗತ್ತು ಭಾರತವನ್ನು ಮೆಚ್ಚುತ್ತದೆ. ಪ್ರಧಾನ ಮಂತ್ರಿ ಮೋದಿ ಅವರು ಗಾಂಧೀಜಿಯವರ ಸ್ವಚ್ಛತಾ ಧ್ಯೇಯವನ್ನು ಸಂಪೂರ್ಣ ಸಮರ್ಪಣೆ ಮತ್ತು ಯಶಸ್ಸಿನಿಂದ ಮುಂದಿಟ್ಟಿದ್ದಾರೆ"ಎಂದು ನಖ್ವಿ ಎಎನ್‌ಐಗೆ ತಿಳಿಸಿದರು.


ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಪ್ರತಿಕ್ರಿಯಿಸಿದ ನಖ್ವಿ, ಕೆಲವರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಗೊಂದಲವನ್ನು ಸೃಷ್ಟಿಸಲು ಮತ್ತು ಸಾರ್ವಜನಿಕರಲ್ಲಿ ಭಯವನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದಲ್ಲಿ ಕಾನೂನುಬದ್ಧವಾಗಿ ಉಳಿದುಕೊಂಡಿರುವ ನಾಗರಿಕರು ಭಯಪಡುವ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದರು.


ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ್ದ  ಅಮಿತ್ ಶಾ, ಅಕ್ರಮವಾಗಿ ದೇಶದೊಳಗೆ ನುಸುಳುವವರಿಗೆ ದೇಶದಲ್ಲಿ ಉಳಿಯಲು ಯಾವುದೇ ಅವಕಾಶ ನೀಡುವುದಿಲ್ಲ. ಆದರೆ ಹಿಂದೂ ಮತ್ತು ಇತರ ಕೆಲವು ಧರ್ಮಗಳಿಗೆ ಸೇರಿದ ನಿರಾಶ್ರಿತರಿಗೆ ಪೌರತ್ವ ನೀಡಲಾಗುವುದು ಎಂದು ಹೇಳಿದ್ದರು.