ರಾಂಚಿ: ಕಳೆದ ಜೂನ್ ತಿಂಗಳಿನಲ್ಲಿ ಮೋಟರ್ ಸೈಕಲ್ ಕದ್ದಿದ್ದಾನೆಂದು ಆರೋಪಿಸಿ ಜನರ ಗುಂಪೊಂದು ತಬ್ರೇಝ್ ಅನ್ಸಾರಿ ಎಂಬ ವ್ಯಕ್ತಿಯನ್ನು ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ  ಇದೀಗ ಹೊಸ ತಿರುವು ಪಡೆದುಕೊಂಡಿದೆ. 


COMMERCIAL BREAK
SCROLL TO CONTINUE READING

ತಬ್ರೇಝ್ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಅಟಾಪ್ಸಿ ವರದಿ ನೀಡಿದ ಹಿನ್ನೆಲೆಯಲ್ಲಿ, ಸಾಮೂಹಿಕ ಹಲ್ಲೆ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ. 


2019ರ ಜೂನ್ 19ರಂದು ಜಾರ್ಖಂಡ್‌ನ ಸೆರೈಕೆಲಾ ಜಿಲ್ಲೆಯ ಧಟ್ಕಿಡ್ ಗ್ರಾಮದಲ್ಲಿ ಮೋಟರ್ ಬೈಕ್ ಕಳ್ಳತನದ ಅನುಮಾನದ ಮೇಲೆ ಉದ್ರಿಕ್ತಗೊಂಡ ಜನರ ಗುಂಪೊಂದು ಸಮೂಹದಿಂದ ತಬ್ರೇಝ್ ನನ್ನು ಥಳಿಸಿತ್ತು. ಅಷ್ಟೇ ಅಲ್ಲದೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಹಿಂಸೆ ನೀಡಲಾಗಿತ್ತು ಎನ್ನಲಾಗಿದೆ. ಬಳಿಕ ಪ್ರಜ್ಞಾಹೀನನಾಗಿದ್ದ ಆತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ನಾಲ್ಕು ದಿನಗಳ ಬಳಿಕ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. 


ಘಟನೆಯ ನಂತರ, ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಈ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆಗೆ ಆದೇಶಿಸಿದ್ದರು. ಅಲ್ಲದೆ, ಆ ಕ್ಷಣದಿಂದಲೇ ತಕ್ಷಣ ಜಾರಿಗೆ ಬರುವಂತೆ ಜಿಲ್ಲಾ ಉಸ್ತುವಾರಿ ಸರಕೇಲಾ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದರು.


ಆದರೆ ತಬ್ರೇಝ್ ಕುಟುಂಬ ಮಾತ್ರ ಕಳ್ಳತನದ ಆರೋಪವನ್ನು ತಳ್ಳಿಹಾಕಿದ್ದು, ತಬ್ರೇಝ್ ವಿರುದ್ಧದ ಆರೋಪಗಳು ಆಧಾರರಹಿತ ಎಂದು ವಾದಿಸಿತ್ತು. 


ಪುಣೆಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ತಬ್ರೇಝ್, ಘಟನೆ ನಡೆದಾಗ ಈದ್ ರಜಾದಿನಗಳಿಗಾಗಿ ಮನೆಗೆ ಬಂದಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದರು. ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಬೆಳಕಿಗೆ ಬಂದ ಘಟನೆಯಲ್ಲಿ, ಮುಖ್ಯ ಆರೋಪಿ ಪಪ್ಪು ಮಂಡಲ್ ಕಂಬಕ್ಕೆ ಕಟ್ಟಿಹಾಕಿದ್ದ ಅನ್ಸಾರಿ ಅವರನ್ನು ಹೊಡೆಯುತ್ತಿರುವುದು ಕಂಡುಬಂದಿತ್ತು. ಆದರೀಗ ಅಟಾಪ್ಸಿ ವರದಿಯಲ್ಲಿ ಆಟ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದ ಬಳಿಕ ಆರೋಪಿಗಳನ್ನು ಪೊಲೀಸರು ಪ್ರಕರಣದಿಂದ ಖುಲಾಸೆಗೊಳಿಸಿದ್ದಾರೆ.