ತಮಿಳುನಾಡು ಡಿಎಂಕೆ ಅಧಿನಾಯಕ, ಕಲೈಗ್ನಾರ್ ಎಂ.ಕರುಣಾನಿಧಿ ಇನ್ನಿಲ್ಲ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ.
ಚೆನ್ನೈ: ಕಳೆದ ಒಂದು ವಾರದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಮಂಗಳವಾರ ಸಂಜೆ 6.10ಕ್ಕೆ ನಿಧನರಾಗಿದ್ದಾರೆ.
ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಡಿಎಂಕೆ ನಾಯಕ ಎಂ.ಕರುಣಾನಿಧಿ(94) ಅವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಕಳೆದ ಒಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂ.ಕರುಣಾನಿಧಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಇದರಿಂದ ರಾಜ್ಯಕ್ಕೆ ಹಾಗೂ ದೇಶಕ್ಕೆ ಅಪಾರ ನಷ್ಟವಾಗಿದ್ದು, ತಮಿಳುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ತೊರೆದಿದ್ದಾರೆ.
ಎಂ.ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಂಗಳವಾರ ಮಧ್ಯಾಹ್ನ ಪ್ರಕಟಣೆ ಹೊರಡಿಸಿದ್ದ ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ, "ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ತಜ್ಞ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ" ಎಂದು ತಿಳಿಸಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಎಂ.ಕರುಣಾನಿಧಿ ಮೃತಪಟ್ಟಿದ್ದಾರೆ ಎಂದು ಕಾವೇರಿ ಆಸ್ಪತ್ರೆ ವೈದ್ಯರು ಘೋಷಿಸಿದ್ದಾರೆ.