ಗರ್ಭಿಣಿಯಾಗಿದ್ದರೇ ಜಯಲಲಿತಾ? ಹೈಕೋರ್ಟ್ನಲ್ಲಿ ತಮಿಳುನಾಡು ಸರ್ಕಾರ ಹೇಳಿದ್ದೇನು?
1980ರಲ್ಲಿ ನಡೆದ ಫಿಲಂ ಫೇರ್ ಪ್ರಶಸ್ತಿ ಸಮಾರಂಭದ ವೀಡಿಯೋ ಸಲ್ಲಿಸಿರುವ ತಮಿಳುನಾಡು ಸರಕಾರ, ಆಕೆ ಗರ್ಭವತಿ ಆಗಿದ್ದಂತೆ ತೋರುತ್ತಿಲ್ಲ ಎಂಡು ಸ್ಪಷ್ಟಪಡಿಸಿದೆ.
ಚೆನ್ನೈ: ಎಐಡಿಎಂಕೆ ನಾಯಕಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಗರ್ಭವತಿ ಆಗಿರಲಿಲ್ಲ ಎಂದು ತಮಿಳುನಾಡು ಸರಕಾರ ಇಂದು ಮದ್ರಾಸ್ ಹೈಕೋರ್ಟ್ನಲ್ಲಿ ಸಾಕ್ಷ್ಯ ಸಲ್ಲಿಸಿದೆ. 1980ರಲ್ಲಿ ನಡೆದ ಫಿಲಂ ಫೇರ್ ಪ್ರಶಸ್ತಿ ಸಮಾರಂಭದ ವೀಡಿಯೋ ಸಲ್ಲಿಸಿರುವ ತಮಿಳುನಾಡು ಸರಕಾರ, ಆಕೆ ಗರ್ಭವತಿ ಆಗಿದ್ದಂತೆ ತೋರುತ್ತಿಲ್ಲ ಎಂಡು ಸ್ಪಷ್ಟಪಡಿಸಿದೆ.
ಬಹುದಿನಗಳ ಅನಾರೋಗ್ಯದ ನಂತರ 2016ರ ಡಿಸೆಂಬರ್ ತಿಂಗಳಿನಲ್ಲಿ ಜಯಲಲಿತಾ ಮೃತಪಟ್ಟಿದ್ದರು. ಅವರ ಸಾವಿನ ನಂತರ ಬೆಂಗಳೂರಿನ ಅಮೃತ ಎಂಬ ಮಹಿಳೆ, ತಾನು ಜಯಲಲಿತಾ ಅವರ ಪುತ್ರಿ ಎಂದೂ, 1980ರ ಆಗಸ್ಟ್ 14ರಂದು ಜನಿಸಿದ್ದಾಗಿಯೂ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅಲ್ಲದೆ, ಫಿಲಂ ಫೇರ್ ಪ್ರಶಸ್ತಿ ಸಮಾರಂಭ ನಡೆದ ಒಂದು ತಿಂಗಳ ನಂತರ ತಾವು ಜನಿಸಿದ್ದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ತಮಿಳುನಾಡು ಸರ್ಕಾರ 1980ರಲ್ಲಿ ನಡೆದ ಫಿಲಂ ಫೇರ್ ಕಾರ್ಯಕ್ರಮದ ವೀಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ತಮಿಳುನಾಡು ಸರ್ಕಾರದ ಪರ ವಕೀಲ ವಿಜಯ ನಾರಾಯಣ್, ಈ ವೀಡಿಯೋದಲ್ಲಿ ಜಯಲಲಿತಾ ಗರ್ಭವತಿಯಂತೆ ಕಾಣುತ್ತಿಲ್ಲ. ಜಯಲಲಿತಾ ಆಸ್ತಿ ದೋಚಲು ಅಮೃತಾ ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.
ಈಗಾಗಲೇ ಅಮೃತಾ ತಾವು ಜಯಲಲಿತಾ ಪುತ್ರಿ ಎಂಬುದಕ್ಕೆ ನ್ಯಾಯಾಲಯಕ್ಕೆ ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದು, ಡಿಎನ್ಎ ಪರೀಕ್ಷೆಯನ್ನೂ ಮಾಡಿಸಿ ಎಂದು ಪಟ್ಟುಹಿಡಿದಿದ್ದಾರೆ. ಆದರೆ ರಾಜ್ಯ ಸರಕಾರ ಅಮೃತಾ ಅವರ ಎಲ್ಲಾ ಬೇಡಿಕೆಗಳನ್ನೂ ನಿರಾಕರಿಸಿದೆ. ಸದ್ಯ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜುಲೈ 31ಕ್ಕೆ ಮುಂದೂಡಿದೆ.