ನವದೆಹಲಿ : ಉತ್ತರಪ್ರದೇಶ ಉಪಚುನಾವಣೆ ಸೋಲಿನ ಬೆನ್ನಲ್ಲೇ ಮೋದಿ ಸರ್ಕಾರಕ್ಕೆ ಮತ್ತೊಂದು ಹಿನ್ನೆಡೆ ಉಂಟಾಗಿದೆ. ಈ ಹಿಂದೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸರ್ಕಾರದ ಕ್ಯಾಬಿನೆಟ್ ನಿಂದ ಹೊರಬಂದಿದ್ದ ತೆಲುಗು ದೇಶಂ ಪಕ್ಷ(ಟಿಡಿಪಿ) ಇಂದು ಮೈತ್ರಿಕೂತದಿಂದ ಅಧಿಕೃತವಾಗಿ ಹೊರಬಂದಿದೆ. 


COMMERCIAL BREAK
SCROLL TO CONTINUE READING

ಈ ಸಂಬಂಧ ಇಂದು ಸಂಸತ್ತಿನಲ್ಲಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮುಂದಾಗಿದೆ. ಅದಕ್ಕೂ ಮುನ್ನ ವಿಪಕ್ಷಗಳ ಜೊತೆಗೆ ಚಂದ್ರಬಾಬು ನಾಯ್ಡು ಮಾತುಕತೆ ನಡೆಸಿದ್ದು, ಕಾಂಗ್ರೆಸ್‌ ಪಕ್ಷದ ಸಂಸದ ವೈ ವಿ ಸುಬ್ಟಾ ರೆಡ್ಡಿ ಅವರು ಇಂದು  ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಸಿಪಿಎಂ ನ ಸೀತಾರಾಮ ಯೆಚೂರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿಯಾಗಿ ಅವರಿಗೆ, ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಕೋರುವ ಜಗನ್‌ಮೋಹನ್‌ ರೆಡ್ಡಿ ಅವರ ಪತ್ರವನ್ನು ನೀಡಿದ್ದಾರೆ.  



ಅವಿಶ್ವಾಸ ಗೊತ್ತುವಳಿಯ ಬಳಿಕವೂ ಕೇಂದ್ರ ಸರಕಾರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದರೆ ನಮ್ಮ ಪಕ್ಷದ ಎಲ್ಲ ಸಂಸದರು 2018ರ ಏಪ್ರಿಲ್‌ 6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀದಲಿದ್ದಾರೆ ಎಂಬುದಾಗಿ ರೆಡ್ಡಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ. 


ಅವಿಶ್ವಾಸ ನಿರ್ಣಯ ಮಂಡನೆ ಮನವಿಗೆ 50 ಸಂಸದರ ಸಹಿಯ ಅವಶ್ಯಕತೆ ಇದ್ದು, ಟಿಡಿಪಿ ಸದ್ಯಸ್ಯರು ವೈಎಸ್​ಆರ್​ ಪಕ್ಷದ ಮನವಿಗೆ ಸಹಿ ಹಾಕಿದ್ದಾರೆ. ಒಂಬತ್ತು ಸಂಸದನ್ನು ಹೊಂದಿರುವ ವೈಎಸ್​ಆರ್​ಗೆ ಟಿಡಿಪಿಯ 16 ಸಂಸದರು, ಕಾಂಗ್ರೆಸ್​ 48 ಸಂಸದರು, ತೃಣಮೂಲ ಕಾಂಗ್ರೆಸ್​ 34 ಸಂಸದರು ಬೆಂಬಲ ಸೂಚಿಸಿದ್ದಾರೆ. ಇನ್ನು ಅವಿಶ್ವಾಸ ನಿರ್ಣಯ ಬಾಣದಿಂದ ಪಾರಾಗಲು ಪ್ರಧಾನಿ ನರೇಂದ್ರ ಮೋದಿ 272 ಸಂಸದರ ಬೆಂಬಲ ಬೇಕಾಗಿದ್ದು, ಈಗಾಗಲೇ ಎನ್​ಡಿಎ307 ಸದಸ್ಯ ಬಲವನ್ನು ಹೊಂದಿರುವುದರಿಂದ ಮೋದಿಗೆ ಅವಿಶ್ವಾಸ ನಿರ್ಣಯ ಮಂಡನೆಯಾದರೂ ಯಾವುದೇ ತೊಂದರೆ ಇಲ್ಲ ಎನ್ನಲಾಗುತ್ತಿದೆ.