ಶಿಕ್ಷಕರೇ ನಿಜವಾದ ರಾಷ್ಟ್ರ ನಿರ್ಮಾಣಕಾರರು: ಸೋನಿಯಾ ಗಾಂಧಿ
ಶಿಕ್ಷಕರ ದಿನದಂದು, ನಾನು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ನಮ್ಮ ಶಿಕ್ಷಕರು ನಿಜವಾದ ರಾಷ್ಟ್ರ ನಿರ್ಮಾಣಕಾರರು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ನವದೆಹಲಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ಸಮುದಾಯವನ್ನು ಅಭಿನಂದಿಸಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಶಿಕ್ಷಕರೇ ನಿಜವಾದ ರಾಷ್ಟ್ರ ನಿರ್ಮಾತೃಗಳು ಎಂದು ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಶಿಕ್ಷಕರ ದಿನದಂದು, ನಾನು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ನಮ್ಮ ಶಿಕ್ಷಕರು ನಿಜವಾದ ರಾಷ್ಟ್ರ ನಿರ್ಮಾಣಕಾರರು. ಏಕೆಂದರೆ ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಮತ್ತು ಅವರಿಗೆ ಪ್ರಾಮಾಣಿಕತೆಯ ಸರಿಯಾದ ಮಾರ್ಗವನ್ನು ತೋರಿಸುವ ಪ್ರಮುಖ ಜವಾಬ್ದಾರಿ ಅವರ ಮೇಲಿದೆ" ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ದೇಶಪ್ರೇಮ, ಕಠಿಣ ಪರಿಶ್ರಮ ಮತ್ತು ಭಕ್ತಿಯ ಮಹತ್ವ ಕಲಿಸುವ ಮೂಲಕ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ. ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ಮಿಸುತ್ತಾರೆ ಎಂದು ಸೋನಿಯಾಗಾಂಧಿ ವಿವರಿಸಿದರು.
"ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುತ್ತಾರೆ, ಕಲ್ಪನೆಯನ್ನು ಬೆಳಗಿಸುತ್ತಾರೆ ಮತ್ತು ಅವರ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಾರೆ. ಅವರು ಜೀವನದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ಕಠಿಣ ಪರಿಶ್ರಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಗಾಗಿ ನಾವು ಯಾವಾಗಲೂ ಅವರಿಗೆ ಋಣಿಯಾಗುತ್ತೇವೆ" ಎಂದು ಸೋನಿಯಾ ಹೇಳಿದ್ದಾರೆ.
ಸೆಪ್ಟೆಂಬರ್ 5, 1888 ರಂದು ಜನಿಸಿದ ತತ್ವಜ್ಞಾನಿ-ಲೇಖಕ ಮತ್ತು ಭಾರತದ ಎರಡನೇ ರಾಷ್ಟ್ರಪತಿಯಾದ ಡಾ.ಎಸ್. ರಾಧಾಕೃಷ್ಣ ಅವರ ನೆನಪಿಗಾಗಿ ಶಿಕ್ಷಕರ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅನುಕರಣೀಯ. 1962 ರಲ್ಲಿ ರಾಧಾಕೃಷ್ಣನ್ ಮತ್ತು ಎಲ್ಲಾ ಶಿಕ್ಷಕರನ್ನು ಗೌರವಿಸಲು ಆರಂಭವಾದ ಶಿಕ್ಷಕರ ದಿನಾಚರಣೆ ಆಚರಿಸುವ ಸಂಪ್ರದಾಯ ಇಂದಿಗೂ ಮುಂದುವರೆದಿದೆ.