ವೇಲೂರು: ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಅಭಿನಯದ 'ವಿಶ್ವಾಸಂ' ಸಿನಿಮಾ ನೋಡಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಗನೇ ಅಪ್ಪನ ಮೇಲೆ ಪೇಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

'ವೀರಂ', 'ವೇದಳಂ', 'ವಿವೇಗಮ್'​​ ನಂತಹ ಬ್ಲಾಕ್ ಬ್ಲಾಸ್ಟರ್ ಸಿನಿಮಾ ಕೊಟ್ಟ ನಟ ಅಜಿತ್ ಅಭಿನಯದ 'ವಿಶ್ವಾಸಂ' ಸಿನಿಮಾ ಗುರುವಾರ ಬಿಡುಗಡೆಗೊಂಡಿದೆ. ಈಗಾಗಲೇ ಸಾಕಷ್ಟು ಅಭಿಮಾನಿಗಳು ಸಿನಿಮಾ ನೋಡಿ ಸಲಾಂ ಹೊಡೆದಿದ್ದಾರೆ. ಆದರೆ, ಈ ಸಿನಿಮಾ ನೋಡಲೇಬೇಕು ಅಂತ ಹಠ ಹಿಡಿದ ವೇಲೂರು ಜಿಲ್ಲೆಯ ಅಜಿತ್ ಕುಮಾರ್(20) ಎಂಬ ಯುವಕ ಸಿನಿಮಾ ನೋಡಲು ತಂದೆ ಪಾಂಡಿಯನ್​​(44) ಬಳಿ ಹಣ ಕೇಳಿದ್ದಾನೆ. ಆದರೆ ಹಣ ನೀಡಲು ತಂದೆ ನಿರಾಕರಿಸಿದ್ದರು ಎನ್ನಲಾಗಿದೆ. 


ದಿನಗೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಪಾಂಡಿಯನ್ ಪತ್ನಿಯೊಂದಿಗೆ ಜಗಳವಾಡಿಕೊಂಡು ಕಲಿನ್ಜುರ್ ಪ್ರದೇಶದ ರಸ್ತೆಬದಿಯ ಅಂಗಡಿ ಮುಂದೆ ಮಲಗಿದ್ದ ಸಂದರ್ಭದಲ್ಲಿ, ತಂದೆಯನ್ನು ಹುಡುಕಿಕೊಂಡು ಬಂದ ಮಗ ಅಜಿತ್ ಕುಮಾರ್ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ತಂದೆ ಪಾಂಡಿಯನ್ ನಿರಾಕರಿಸಿದಾಗ ಕೋಪಗೊಂಡ ಅಜಿತ್ ತಂದೆ ಮೇಲೆ ಪ್ರೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಬಳಿಕ ಅಲ್ಲೇ ಮಲಗಿದ್ದ ಇತರ ಕೆಲಸಗಾರರು ಪಾಂಡಿಯನ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಂಡಿಯನ್ ಮುಖ, ತಲೆ ಮತ್ತು ಭುಜದಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 


ಇದೀಗ ಪೊಲೀಸರು ಆರೋಪಿ ಅಜಿತ್ ಕುಮಾರ್'ನನ್ನು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ.