ಇಂದು ದೇವೇಗೌಡರನ್ನು ಭೇಟಿಯಾಗಲಿರುವ ತೆಲಂಗಾಣ ಸಿಎಂ ಕೆಸಿಆರ್
ಭೇಟಿ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಸ್ಪರ್ಧೆ ನೀಡಲು ತೃತೀಯ ರಂಗ ರಚಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಇಂದು(ಏ. 13) ಬೆಂಗಳೂರಿಗೆ ಆಗಮಿಸುತ್ತಿದ್ದು, ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಮುಖ್ಯಸ್ಥ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಸ್ಪರ್ಧೆ ನೀಡಲು ತೃತೀಯ ರಂಗ ರಚಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇಂದು ಬೆಳಿಗ್ಗೆ 11:30ಕ್ಕೆ ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ದೇವೇಗೌಡರ ಅಮೋಘ ನಿವಾಸದಲ್ಲಿ ಕೆಸಿಆರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ವಾರದ ಹಿಂದೆಯಷ್ಟೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾಗಿ 2019ರ ಲೋಕಸಭೆ ಚುನಾವಣೆಯಲ್ಲಿ ತೃತೀಯ ರಂಗ ರಚಿಸುವ ವಿಷಯವಾಗಿ ಸಮಾಲೋಚನೆ ನಡೆಸಿದ್ದ ಕೆಸಿಆರ್, ಇಂದು ಎಚ್ಡಿಡಿ ಅವರನ್ನು ಭೇಟಿಯಾಗುತ್ತಿರುವುದು ಎಲ್ಲರಲ್ಲೂ ಕುತೂಹಲ ಉಂಟುಮಾಡಿದೆ.
ಈ ಹಿಂದೆ ತೃತೀಯ ರಂಗದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡು ಪ್ರಧಾನಿಯಾಗಿದ್ದ ದೇವೇಗೌಡರು ಮತ್ತೆ ತೃತೀಯ ರಂಗ ರಚನೆಗೆ ಬೆಂಬಲ ಸೂಚಿಸುವರೇ ಎಂಬುದನ್ನು ಕಾದು ನೋಡಬೇಕಿದೆ.