ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ನಾಯಕ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಕೆ. ಕವಿತಾ ಅವರು ನಿಜಾಮಾಬಾದ್ ಪಾರ್ಲಿಮೆಂಟರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಿ. ಅರವಿಂದ್ ಎದುರು 70,875 ಮತಗಳಿಂದ ಸೋಲನುಭವಿಸಿದ್ದಾರೆ. ಗಮನಾರ್ಹವಾಗಿ ಡಿ. ಅರವಿಂದ್ ಮೊದಲ ಬಾರಿಗೆ ಗೆದ್ದಿದ್ದಾರೆ.


COMMERCIAL BREAK
SCROLL TO CONTINUE READING

"ಸೋಲು-ಗೆಲುವು ಏನೇ ಇದ್ದರೂ ನನ್ನ ಜೀವನ ಸಾರ್ವಜನಿಕರಿಗಾಗಿ. ನಾನು ತೆಲಂಗಾಣ ಆಂದೋಲನದ ಸಮಯದಲ್ಲಿ ಕಠಿಣ ಹೋರಾಟ ನಡೆಸಿದ್ದೇನೆ. ಓರ್ವ ಸಂಸದೆಯಾಗಿ ನನ್ನ ನಿಜಾಮಾಬಾದ್ ಕ್ಷೇತ್ರದ ಜನತೆಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದ ನಿಜಾಮಾಬಾದ್ನ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ" ಎಂದು ಕೆ. ಕವಿತಾ ಹೇಳಿದ್ದಾರೆ.


ಇದೇ ಸಂದರ್ಭದಲ್ಲಿ ಡಿ. ಅರವಿಂದ್ ಅವರ ಗೆಲುವಿಗಾಗಿ ಅವರನ್ನು ಅಭಿನಂದಿಸಿದರು. 


ಟಿಆರ್ಎಸ್ ಅಭ್ಯರ್ಥಿ ನರಸಿಂಹ ರೆಡ್ಡಿಯ ವಿರುದ್ಧ 25,682 ಮತಗಳ ಅಂತರದಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಉಟ್ಟಮ್ ಕುಮಾರ್ ರೆಡ್ಡಿ ನಲ್ಗೊಂಡ ಸಂಸದೀಯ ಕ್ಷೇತ್ರವನ್ನು ಗೆದ್ದಿದ್ದಾರೆ.


ಬಿಜೆಪಿಯ ಸಿಕಂದರಾಬಾದ್ ಪಾರ್ಲಿಮೆಂಟರಿ ಕ್ಷೇತ್ರದ ಅಭ್ಯರ್ಥಿ ಕಿಶನ್ ರೆಡ್ಡಿ ಕೂಡ ಟಿಆರ್ಎಸ್ ಅಭ್ಯರ್ಥಿ ಸಾಯಿ ಕಿರಣ್ ಯಾದವ್ ವಿರುದ್ಧ 62,114 ಮತಗಳ ಅಂತರದಿಂದ ಜಯಗಳಿಸಿದ್ದಾರೆ.


ತೆಲಂಗಾಣದಲ್ಲಿ ಟಿಆರ್ಎಸ್ ಒಂಬತ್ತು ಸಂಸದೀಯ ಸ್ಥಾನಗಳನ್ನು ಗೆದ್ದುಕೊಂಡಿತು. ಇದೇ ವೇಳೆ ಬಿಜೆಪಿ ನಾಲ್ಕು ಸಂಸತ್ ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದಿತು ಮತ್ತು AIMIM ಒಂದು ಸೀಟನ್ನು ಗೆದ್ದಿತು.