ನವದೆಹಲಿ:  ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ದಿಷ್ಟ ಮುಷ್ಕರ ಕೈಗೊಂಡಿರುವ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್‌ಆರ್‌ಟಿಸಿ) 48,000 ಉದ್ಯೋಗಿಗಳನ್ನು ಮತ್ತು ಕಾರ್ಮಿಕರನ್ನು ಕೆ.ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ಭಾನುವಾರ ವಜಾ ಮಾಡಿದೆ.


COMMERCIAL BREAK
SCROLL TO CONTINUE READING

ಮುಷ್ಕರ ನಿರತ ಕಾರ್ಮಿಕರಿಗೆ ಎರಡು ದಿನಗಳ ಗಡುವುನ್ನು ರಾಜ್ಯ ಸರ್ಕಾರ ನೀಡಿತ್ತು, ಆದರೆ ನೌಕರರು ಮುಷ್ಕರವನ್ನು ಕೊನೆಗೊಳಿಸಲು ನಿರಾಕರಿಸಿದ್ದರು. ಈಗ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅವರನ್ನು ವಜಾಗೊಳಿಸಿದೆ. ಇನ್ನೊಂದೆಡೆಗೆ ಸಿಎಂ ಕೆಸಿಆರ್ ನೌಕರರೊಂದಿನ ಮಾತುಕತೆಗೆ ನಿರಾಕರಿಸಿದ್ದು, ಹಬ್ಬದ ವೇಳೆಯಲ್ಲಿ  ಅವರು ಮುಷ್ಕರ ನಡೆಸಿದ್ದು ಕ್ಷಮಿಸಲಾಗದ ಅಪರಾಧ ಮತ್ತು ಟಿಎಸ್ಆರ್ಟಿಸಿಗೆ 1,200 ಕೋಟಿ ರೂ.ಗಳನಷ್ಟವಾಗುತ್ತಿದೆ ಮತ್ತು ಅದರ ಸಾಲದ ಹೊರೆ 5,000 ಕೋಟಿ ರೂ.ಗೆ ಏರಿದೆ ಎಂದು ಅವರು ಹೇಳಿದರು.


ರಸ್ತೆ ಸಾರಿಗೆ ನಿಗಮದ ಸುಮಾರು 50,000 ಉದ್ಯೋಗಿಗಳು ಮತ್ತು ಕಾರ್ಮಿಕರು ಶುಕ್ರವಾರ ಮಧ್ಯರಾತ್ರಿಯಿಂದ ಮುಷ್ಕರದಲ್ಲಿದ್ದರು, ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವುದು ಸೇರಿದಂತೆ 26 ಬೇಡಿಕೆಗಳೊಂದಿಗೆ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದರು.


ಇನ್ನೊಂದೆಡೆ ಮುಷ್ಕರದಿಂದಾಗಿ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸದಂತೆ ನೋಡಿಕೊಳ್ಳಲು ಮಾಡಿರುವ ತನ್ನ ಪರ್ಯಾಯ ವ್ಯವಸ್ಥೆಗಳನ್ನು ವಿವರಿಸಲು ತೆಲಂಗಾಣ ಹೈಕೋರ್ಟ್‌ನ ರಜಾ ನ್ಯಾಯಪೀಠವು ಅಕ್ಟೋಬರ್ 10 ಕ್ಕೆ ವಿಚಾರಣೆಯನ್ನು ಸರ್ಕಾರಕ್ಕೆ ನಿಗದಿಪಡಿಸಿದೆ.