ನವದೆಹಲಿ: ತೆಲಂಗಾಣ ವಿಧಾನಸಭೆಗೆ ಶೀಘ್ರದಲ್ಲೇ ಚುನಾವಣೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11ರಂದು ರಾಜ್ಯಕ್ಕೆ ಚುನಾವಣಾ ಆಯೋಗದ ನಿಯೋಗ ಭೇಟಿ ನೀಡಲಿದೆ.



COMMERCIAL BREAK
SCROLL TO CONTINUE READING

ಈ ಬಗ್ಗೆ ಎಎನ್ಐ ಗೆ ಹೇಳಿಕೆ ನೀಡಿರುವ ಮುಖ್ಯ ಚುನಾವಣಾ ಅಧಿಕಾರಿ ಒ.ಪಿ.ರಾವತ್ ಅವರು, ತೆಲಂಗಾಣದಲ್ಲಿ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಲಾಗಿದೆ. ಈ ಸಂದರ್ಭದಲ್ಲಿ ಹಂಗಾಮಿ ಸರ್ಕಾರ ಹೆಚ್ಚು ಕಾಲ ಮುಂದುವರಿಯುವಂತಿಲ್ಲ. ಹಾಗೆಯೇ ಈ ವರ್ಷದ ಕೊನೆಯಲ್ಲಿ ನಡೆಸಲು ನಿರ್ಧರಿಸಿರುವ ಇತರ ರಾಜ್ಯಗಳ ಚುನಾವಣೆಯೊಂದಿಗೆ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಸಬೇಕೆ ಅಥವಾ ಅದಕ್ಕೂ ಮುನ್ನವೇ ನಡೆಸಬೇಕೆ ಎಂಬ ಬಗ್ಗೆ ಆಯೋಗ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ರಾವತ್ ತಿಳಿಸಿದ್ದಾರೆ.


"ಈಗಾಗಲೇ ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿ ರಜತ್ ಕುಮಾರ್ ಅವರಿಗೆ ರಾಜ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ವರದಿ ನೀಡಲು ತಿಳಿಸಿದ್ದು, ಅದರ ಆಧಾರದ ಮೇಲೆ ಚುನಾವಣಾ ಆಯೋಗ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಿದೆ. ಯಾವುದೇ ಜ್ಯೋತಿಷ್ಯ, ಭವಿಷ್ಯದ ಪ್ರಕಾರ ಯಾವುದೇ ದಿನಾಂಕಗಳನ್ನು ಆಯೋಗ ಪರಿಗಣಿಸುವುದಿಲ್ಲ" ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ.



ಇತರ ನಾಲ್ಕು ರಾಜ್ಯಗಳ ಚುನಾವಣೆಯೊಂದಿಗೆ ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆಸಲಾಗುವುದೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್, ಈಗಾಗಲೇ ಕೆಲ ಸಂವಿಧಾನಾತ್ಮಕ ಗಣ್ಯರು ಚುನಾವಣೆ ಅಕ್ಟೋಬರ್ನಲ್ಲಿ ಘೋಷಣೆಯಾಗಿ, ನವೆಂಬರ್'ನಲ್ಲಿ ಮತದಾನ ಮತ್ತು ಡಿಸೆಂಬರ್'ನಲ್ಲಿ ಫಲಿತಾಂಶ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಇದನ್ನು ಆಯೋಗ ಪರಿಗಣಿಸುವುದಿಲ್ಲ. ಚುನಾವಣಾ ದಿನಾಂಕ ನಿಗದಿ ಮಾಡುವ ಮೊದಲು ರಾಜ್ಯಕ್ಕೆ ಆಯೋಗ ಭೇಟಿ ನೀಡಲಿದೆ ಎಂದರು.