ರಾಜಸ್ಥಾನ: ದುರ್ಗಾ ವಿಗ್ರಹ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 10 ಮಂದಿ ಸಾವು
ರಾಜಸ್ಥಾನದ ಧೋಲ್‌ಪುರ ಜಿಲ್ಲೆಯಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ 10 ಜನರು ಪ್ರಬಾತಿ ನದಿಯಲ್ಲಿ ಮುಳುಗಿಹೋದ ಘಟನೆ ನಡೆದಿದೆ.
ಧೋಲ್ಪುರ: ರಾಜಸ್ಥಾನದ ಧೋಲ್‌ಪುರ ಜಿಲ್ಲೆಯಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ 10 ಜನರು ಪ್ರಬಾತಿ ನದಿಯಲ್ಲಿ ಮುಳುಗಿಹೋದ ಘಟನೆ ಮಂಗಳವಾರ ನಡೆದಿದ್ದು, ಈವರೆಗೆ 7 ಜನರ ಶವಗಳನ್ನು ಹೊರತೆಗೆಯಲಾಗಿದೆ.
ಈ ಬಗ್ಗೆ ಧೋಲ್ಪುರ ಜಿಲ್ಲಾಧಿಕಾರಿ ರಾಕೇಶ್ ಜೈಸ್ವಾಲ್ ಮಾಹೀ ನೀಡಿದ್ದು, ಸಂತ್ರಸ್ತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಂದು ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದುರ್ಗಾ ವಿಗ್ರಹ ವಿಸರ್ಜನೆ ವೇಳೆಯಲ್ಲಿ ಹುಡುಗನೊಬ್ಬ ಸ್ನಾನಕ್ಕೆ ನದಿಗೆ ಇಳಿದಿದ್ದು, ಆತನ ಮುಳುಗಲು ಆರಂಭಿಸಿದ್ದ. ಇದನ್ನು ಕಂಡ ಇತರರು ಆತನ ರಕ್ಷಣೆಗೆ ನದಿಗೆ ಹಾರಿದ್ದು, ಅವರೂ ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ಸ್ಥಳೀಯ ಡೈವರ್‌ಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಈ ಘಟನೆ ನಡೆದಿದ್ದು, ಆರಂಭದಲ್ಲಿ 7 ಜನರು ನೀರಿನಲ್ಲಿ ಮುಳುಗಿರುವುದಾಗಿ ವರದಿಯಾಗಿತ್ತು. ಬಳಿಕ ಆರಂಭವಾದ ಶೋಧ ಕಾರ್ಯಾಚರಣೆಯನ್ನು ರಾತ್ರಿಯ ಸಮಯದಲ್ಲಿ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಬುಧವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.