ಪುಲ್ವಾಮಾದ ಡ್ರಾಬ್ಗ್ಯಾಮ್ನಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರ ದಾಳಿ
ಪುಲ್ವಾಮಾದ ಡ್ರಾಬ್ಗಮ್ ಪ್ರದೇಶದಲ್ಲಿ ಮಂಗಳವಾರ ಉಗ್ರರು ಭದ್ರತಾ ಪಡೆಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಶ್ರೀನಗರ: ಪುಲ್ವಾಮಾದ ಡ್ರಾಬ್‌ಗ್ಯಾಮ್ ಪ್ರದೇಶದಲ್ಲಿ ಮಂಗಳವಾರ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಭದ್ರತಾ ಪಡೆಗಳೂ ಪ್ರತೀಕಾರ ತೀರಿಸಿಕೊಂಡಿವೆ. ದಾಳಿ ಬಳಿಕ ಕೆಲ ಸಮಯದವರೆಗೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ಮುಂದುವರೆದಿತ್ತು. ಭದ್ರತಾ ಪಡೆಗಳ ಗಸ್ತು ತಂಡದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಅವರ ಮೇಲೆ ಹಲ್ಲೆ ನಡೆಸಿದ ಭಯೋತ್ಪಾದಕರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
28 ಯುರೋಪಿಯನ್ ಯೂನಿಯನ್ ಸಂಸದರ ತಂಡ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಸಮಯದಲ್ಲೇ ಈ ಭಯೋತ್ಪಾದಕ ದಾಳಿ ನಡೆದಿದೆ. ಆರ್ಟಿಕಲ್ 370 ನ್ನು ರದ್ದುಗೊಳಿಸಿದ ಬಳಿಕ ರಾಜ್ಯದ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯಲು ಈ ನಿಯೋಗವು ಇಲ್ಲಿಗೆ ಭೇಟಿ ನೀಡಿದೆ.
ಸಿಆರ್‌ಪಿಎಫ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಕೆಲವು ಅಪರಿಚಿತ ಭಯೋತ್ಪಾದಕರು ಡ್ರಾಬ್‌ಗ್ಯಾಮ್‌ನ ಶಾಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಪೋಸ್ಟ್ ಮಾಡಿದ ಸಿಆರ್‌ಪಿಎಫ್‌ಗೆ 6-7 ಸುತ್ತು ಗುಂಡು ಹಾರಿಸಿದ್ದಾರೆ. ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರನ್ನು ಪರೀಕ್ಷಾ ಕೇಂದ್ರದಲ್ಲಿ ನಿಯೋಜಿಸಲಾಗಿತ್ತು. ಆದರೆ ಘಟನೆಯಲ್ಲಿ ಯಾವುದೇ ಸಾವು-ನೋವು ಉಂಟಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.
ಇದಕ್ಕೂ ಮುನ್ನ ಸೋಮವಾರ ಸೊಪೋರ್‌ನಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದರು. ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನ ಬಸ್ ನಿಲ್ದಾಣದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 19 ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.