ನವ ದೆಹಲಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ಭಾನುವಾರ ನಸುಕಿನ ವೇಳೆ ದಾಳಿ ನಡೆಸಿದ ಉಗ್ರರು ಐವರು ಭದ್ರತಾ ಸಿಬಂದಿಗಳನ್ನು ಹತ್ಯೆಗೈದಿದ್ದಾರೆ. ಇವರ ಪೈಕಿ ಓರ್ವ ಹತ್ತನೇ ತರಗತಿಯ ವಿದ್ಯಾರ್ಥಿ ಎಂಬ ಆಘಾತಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಜಮ್ಮು ಕಾಶ್ಮೀರದಲ್ಲಿ ಉಗ್ರವಾದವು ನಿರ್ನಾಮವಾಗುತ್ತಾ ಬಂದಿದೆ ಎಂದು ಈಚೆಗಷ್ಟೇ ಭದ್ರತಾ ದಳ ಹೇಳಿಕೊಂಡಿತ್ತು. ಆದರೆ ಈಗ ಉಗ್ರರ ವಯಸ್ಸನ್ನು ಗಮನಿಸಿದರೆ ಸಣ್ಣ ಸಣ್ಣ ಪ್ರಾಯದವರೂ ಭಯೋತ್ಪಾದಕ ಸಂಘಟನೆಗಳನ್ನು ಸೇರಿಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದೆ. ಎಲ್ಲಕ್ಕಿಂತ ಮಿಗಿಲಾದ ಸಂಗತಿ ಎಂದರೆ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿಗೈದ ಉಗ್ರರ ಪೈಕಿ ಒಬ್ಬನಾಗಿರುವ 10ನೇ ತರಗತಿ ಓದುತ್ತಿರುವ ಹುಡುಗನ ತಂದೆ ಜಮ್ಮು ಕಾಶ್ಮೀರ ಪೊಲೀಸ್‌ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದೇ ಆಗಿದೆ. 


ಈವರೆಗೆ ಇಬ್ಬರು ಉಗ್ರರನ್ನು ಭದ್ರತಾ ಸಿಬ್ಬಂದಿಗಳು ಕೊಂದಿದ್ದು, ಇತರರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. 


ಭಾನುವಾರ ಮುಸುಕಿನಲ್ಲಿ ಸಿಆರ್ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರು ಕಾಶ್ಮೀರದವರಾಗಿದ್ದು, ಪಾಕಿಸ್ತಾನ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ತಾನು ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.