ನವದೆಹಲಿ: ಪಾಟ್ನಾ ಮತ್ತು ಬಿಹಾರದ ಇತರ ನಗರಗಳಲ್ಲಿನ ವಾಯುಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದಾದ್ಯಂತ 15 ವರ್ಷ ಹಳೆಯ ಸರ್ಕಾರಿ ಮತ್ತು ವಾಣಿಜ್ಯ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಬಿಹಾರದ ಕೆಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ತಿಳಿಸಿದ್ದಾರೆ. ಈ ನಿಯಮ ನವೆಂಬರ್ 5(ಮಂಗಳವಾರ)ದಿಂದ ಜಾರಿಗೆ ಬರಲಿದೆ.


ರಾಜ್ಯದಾದ್ಯಂತ 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಸರ್ಕಾರಿ, ವಾಣಿಜ್ಯ ವಾಹನಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕುಮಾರ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.


"ಸಾರಿಗೆ ಇಲಾಖೆ ನಾಳೆ ವಿಶೇಷ ಡ್ರೈವ್ ಪ್ರಾರಂಭಿಸುತ್ತಿದೆ, 15 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಮಾಲಿನ್ಯ ಪರೀಕ್ಷೆಗೆ ಒಳಗಾಗುವಂತಹ ಶಿಬಿರಗಳನ್ನು ಸ್ಥಾಪಿಸಲಾಗುವುದು. ಅದರ ನಂತರವೇ ವಾಹನ ಚಾಲನೆಗೆ ಅವಕಾಶ ನೀಡಲಾಗುವುದು" ಎಂದು ಅವರು ತಿಳಿಸಿದರು.



ಈ ಮಧ್ಯೆ, 15 ವರ್ಷದ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದರೂ, ಆ ವಾಹನಗಳೂ ಕೂಡ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.


ರೈತರು ಕೂಳೆ ಸುಡುವುದರ ಮೂಲಕ ಉಂಟಾಗಿರುವ ಮಾಲಿನ್ಯವನ್ನು ಕಡಿಮೆ ಮಾಡಲು ಒತ್ತು ನೀಡಿದ ನಿತೀಶ್ ಕುಮಾರ್, ಒಣಹುಲ್ಲಿನಲ್ಲನ್ನು ಸುಡುವ ರೈತರಿಗೆ ಕೃಷಿ ಸಬ್ಸಿಡಿ ಸಿಗುವುದಿಲ್ಲ ಎಂದು ಹೇಳಿದರು. ಮಾಲಿನ್ಯವನ್ನು ನಿಯಂತ್ರಿಸಲು ಇಟ್ಟಿಗೆ ಗೂಡು ಇತ್ತೀಚಿನ ತಂತ್ರವನ್ನು ಬಳಸುತ್ತಿದೆಯೇ ಎಂದು ತನಿಖೆ ನಡೆಸುವಂತೆ ಅವರು ಅಧಿಕಾರಿಗಳನ್ನು ಸೂಚಿಸಿದರು.


ದೀಪಾವಳಿಯ ನಂತರ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವ ಪರಿಣಾಮ ನವದೆಹಲಿ ಮತ್ತು ಉತ್ತರ ಭಾರತದ ಹಲವಾರು ಭಾಗಗಳು ತತ್ತರಿಸುತ್ತಿವೆ. ದೆಹಲಿ-ಎನ್‌ಸಿಆರ್‌ನಲ್ಲಿನ ಸ್ಥಿತಿ ನಿರಂತರವಾಗಿ ಹದಗೆಡುತ್ತಿದೆ ಮತ್ತು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 'ತೀವ್ರ' ಹದಗೆಟ್ಟಿದೆ. ಹರಿಯಾಣ ಮತ್ತು ಪಂಜಾಬ್‌ನಲ್ಲಿ ಕೂಳೆ ಸುಡುವುದು ವಾಯುಮಾಲಿನ್ಯ ಹೆಚ್ಚಾಗಲು ಪ್ರಾಥಮಿಕ ಕಾರಣ ಎಂದು ಹೇಳಲಾಗುತ್ತಿದೆ.


ವಾಯುಮಾಲಿನ್ಯವನ್ನು ನಿಗ್ರಹಿಸಲು ದೆಹಲಿ ಸರ್ಕಾರ ಸೋಮವಾರ ಆಡ್-ಈವನ್ ಯೋಜನೆಯನ್ನು ಪ್ರಾರಂಭಿಸಿದೆ.



(With ANI inputs)