ನವದೆಹಲಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ  ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಶಸ್ತ್ರಸಜ್ಜಿತ ವ್ಯಕ್ತಿ ರಾಮ್ ಭಕ್ತ ಗೋಪಾಲ್ ಎಂದು ವರದಿಯಾದ ನಂತರ ಗೃಹ ಸಚಿವ ಅಮಿತ್ ಶಾ ಕೇಂದ್ರ ಸರ್ಕಾರ ಇಂತಹ ಘಟನೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ಜಾಮಿಯಾ ಪ್ರದೇಶದಲ್ಲಿನ ಶೂಟ್ ಔಟ್ ಘಟನೆ ಕುರಿತು ದೆಹಲಿ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಇಂತಹ ಯಾವುದೇ ಘಟನೆಯನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಪರಾಧಿಗಳನ್ನು ಬಿಡಲಾಗುವುದಿಲ್ಲ ”ಎಂದು ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.



ದೆಹಲಿ ಶೂಟ್ ಔಟ್ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ "ಹದಗೆಡುತ್ತಿರುವ" ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ವಹಿಸುವಂತೆ ಗೃಹ ಸಚಿವರನ್ನು ಒತ್ತಾಯಿಸಿದರು. “ದೆಹಲಿಯಲ್ಲಿ ಏನಾಗುತ್ತಿದೆ? ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ದಯವಿಟ್ಟು ದೆಹಲಿಯ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳಿ ”ಎಂದು ಕೇಜ್ರಿವಾಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.



ಶೂಟ್ ಔಟ್ ನಲ್ಲಿ ಭಾಗಿಯಾದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಭೀತಿಯನ್ನು ಹುಟ್ಟುಹಾಕಿದ ಇಡೀ ದೃಶ್ಯವನ್ನು ಮಾಧ್ಯಮದ ಕ್ಯಾಮೆರಾಗಳು ಸೆರೆಹಿಡಿದಿದ್ದು, ತಿಳಿ ಬಿಳಿ ಬಣ್ಣದ ಪ್ಯಾಂಟ್ ಮತ್ತು ಕಪ್ಪು ಜಾಕೆಟ್ನಲ್ಲಿ ಆ ವ್ಯಕ್ತಿಯನ್ನು ಸೆರೆ ಹಿಡಿದಿವೆ.