ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಾಟ್ಸಪ್ ಕಂಪನಿ ಸಮರ ಮುಂದುವರೆದಿದ್ದು ಈಗ ಅದು ದೇಶದಿಂದಲೇ ಕಂಪನಿಯನ್ನು ಬ್ಯಾನ್ ಮಾಡುವ ಹಂತಕ್ಕೆ ತಲುಪಿದೆ ಎಂದು ಇಂಡಿಯಾ ಟೈಮ್ಸ್ ಡಾಟ್.ಕಾಮ್ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಮಂತ್ರಾಲಯ ಮತ್ತೊಂದು ಪತ್ರವನ್ನು ಈ ವಿಚಾರವಾಗಿ ಬರೆಯಲು ಸಜ್ಜಾಗಿದ್ದು, ಆ ಮೂಲಕ ಜುಲೈ ತಿಂಗಳಿಂದ ಸರ್ಕಾರ ಕಂಪನಿಗೆ ಬರೆಯುತ್ತಿರುವ ಮೂರನೇ ಪಾತ್ರವಾಗಿದೆ ಎಂದು ತಿಳಿದುಬಂದಿದೆ. 


ಫೇಕ್ ನ್ಯೂಸ್ ಗಳ ಹಾವಳಿಗೆ ತಡೆ ನಿಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಾಟ್ಸಪ್ ಗೆ ಮೆಸೇಜಿನ ಮೂಲವನ್ನು ಕಂಡು ಹಿಡಿಯುವ ಸಾಫ್ಟ್ವೇರ್ ನ್ನು ಅಭಿವೃದ್ದಿಪಡಿಸಲು ಕರೆ ನೀಡಿತ್ತು, ಆದರೆ ವಾಟ್ಸಪ್  ಕಂಪನಿಯ  ವಿಶ್ವಾಸಕ್ಕೆ ಈ ನಡೆ ಧಕ್ಕೆ ತರುತ್ತದೆ ಎಂದು ಅಲ್ಲಗಳೆದಿತ್ತು. ಅದರ ಬದಲಾಗಿ ಫಾರ್ವರ್ಡ್ ಮಾಡುವ ಅವಕಾಶವನ್ನು 5 ಸಂಪರ್ಕಗಳಿಗೆ ಮಾತ್ರ ನಿಗದಿಪಡಿಸಿತ್ತು. ಆದರೆ ಸರ್ಕಾರಕ್ಕೆ ಇದುವರೆಗೆ ವಾಟ್ಸಪ್ ಕೈಗೊಂಡಿರುವ ಎಲ್ಲ ಕ್ರಮಗಳು ತೃಪ್ತಿ ತಂದಿಲ್ಲ ಎಂದು ಹೇಳಲಾಗಿದೆ.


ಹಾಗಾದರೆ ಏನಿದು ಸರ್ಕಾರ ಮತ್ತು ವಾಟ್ಸಪ್ ನಡುವಿನ ಸಮರ 


ಈಗ ಮೋದಿ ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮವಾದ ವಾಟ್ಸಪ್ ನಡುವೆ ನಿರಂತರವಾದ ಜಿದ್ದಾಜಿದ್ದಿ ನಡೆಯುತ್ತಿದೆ ಹಾಗಾದರೆ ಈ ಏನಂತೀರಾ ? ಇಲ್ಲಿದೆ ಇದರ  ಸಂಪೂರ್ಣ ವಿವರ


ಭಾರತ ಅತಿ ಹೆಚ್ಚು ವಾಟ್ಸಪ್ ಬಳಕೆದಾರರನ್ನು ಹೊಂದಿರುವ ದೇಶ, ಆದರೆ ಇತ್ತೀಚಿಗೆ ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಡುವೆ ವಾಗ್ವಾದ ನಡೆಯುತ್ತಿದೆ.ಅದರಲ್ಲೂ ಫೇಕ್ ನ್ಯೂಸ್ ಗಳ ಹಾವಳಿ ವಿಚಾರವಾಗಿ ಸರ್ಕಾರ ಈಗ ವಾಟ್ಸಪ್ ಕಂಪನಿಗೆ ಸೂಚನೆ ನೀಡಿದೆ.  


ಈ ಜಿದ್ದಾಜಿದ್ದಿ ಪ್ರಾರಂಭವಾದದ್ದು ಹೇಗೆ?


ಕೆಲವು ತಿಂಗಳ ಹಿಂದೆ ಈ ಮಾಬ್ ಲಿಂಚಿಂಗ್ (ಗುಂಪು ಹಿಂಸಾಚಾರ)ದ ಘಟನೆಗಳು ದೇಶದಾದ್ಯಂತ ನಡೆದವು. ಇವುಗಳಲ್ಲಿ ಪ್ರಮುಖವಾಗಿ ವಾಟ್ಸಪ್ ನಿಂದ ಫೇಕ್ ನ್ಯೂಸ್ ಗಳು ಪ್ರಸರಿಲ್ಪಟ್ಟಿರುವುದರಿಂದ ಭಾರತ ಸರ್ಕಾರ ವಾಟ್ಸಪ್ ವಿರುದ್ದ ಕ್ರಮ ತೆಗೆದುಕೊಳ್ಳುವಲ್ಲಿ ಮುಂದಾಯಿತು.


ಹಾಗಾದರೆ ಸರ್ಕಾರ ಹೇಳುವುದೇನು ?


ಜುಲೈ 2018ರಲ್ಲಿ ಸರ್ಕಾರ ವಾಟ್ಸಪ್ ಗೆ ಪತ್ರ ಬರೆದು ಫೇಕ್ ನ್ಯೂಸ್ ಗಳು ಹಬ್ಬುತ್ತಿರುವ ವಿಚಾರವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿತು. ಅಲ್ಲದೆ ಅಂತಹ ಫೇಕ್ ನ್ಯೂಸ್ ಗಳ ಮೂಲವನ್ನು ತಿಳಿಯುವಂತೆ ಸಾಫ್ಟ್ವೇರ್ ಅಭಿವೃದ್ದಿ ಪಡಿಸಲು ಸೂಚಿಸಿತು. 


ಇದಕ್ಕೆ ವಾಟ್ಸಪ್ ಪ್ರತಿಕ್ರಿಯಿಸಿದ್ದು ಹೇಗೆ?


ಸರ್ಕಾರದ ಮೊದಲ ಎಚ್ಚರಿಕೆಯ ಪತ್ರಕ್ಕೆ  ಪ್ರತಿಕ್ರಿಯೆ ನೀಡಿದ ವಾಟ್ಸಪ್  ದೇಶದಲ್ಲಿ ನಡೆಯುತ್ತಿರುವ ಈ ಎಲ್ಲ ಫೇಕ್ ನ್ಯೂಸ್ ಮತ್ತು ಮಾಬ್ ಲಿಂಚಿಂಗ್ ವಿಚಾರವಾಗಿ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ,ಫೇಕ್ ನ್ಯೂಸ್ ವಿಚಾರವನ್ನು ಸಾಮೂಹಿಕವಾಗಿ ಬಗೆ ಹರಿಸುವುದಾಗಿ ತಿಳಿಸಿತು, ಸರ್ಕಾರ,ನಾಗರಿಕ ಸಮಾಜ, ಮತ್ತು ಕಂಪನಿ ಒಗ್ಗಟ್ಟಾಗಿ ಸೇರಿ ಇದನ್ನು ಪರಿಹರಿಸಲಿದೆ ಎಂದು ಹೇಳಿತು. 


ವಾಟ್ಸಪ್ ಈ ಸಮಸ್ಯೆಯ ನಿವಾರಣೆ ಮುಂದಾಗಿದ್ದು ಹೇಗೆ? 


ವಾಟ್ಸಪ್ ಈ ಫೇಕ್ ನ್ಯೂಸ್ ನಿವಾರಣೆಗೆ ಕೆಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿತು. ಅದರಲ್ಲಿ ಪ್ರಮುಖವಾಗಿ  ವಾಟ್ಸಪ್ ಸಂದೇಶವನ್ನು ಫಾರ್ವರ್ಡ್ ಮಾಡುವ ಅವಕಾಶವನ್ನು 5 ಕ್ಕೆ ಮಾತ್ರ ಸಿಮಿತಗೊಳಿಸಿತು.


ಎರಡನೇ ಬಾರಿಗೆ ಎಚ್ಚರಿಕೆ ನೀಡಿದ ಸರ್ಕಾರ 


ಹಲವು ವಾರಗಳ ನಂತರ ಸರ್ಕಾರ ಎರಡನೇ ಪತ್ರವನ್ನು ಬರೆದು" ಪಾರದರ್ಶಕತೆಯನ್ನು ತರಲು ಮತ್ತು ಫೇಕ್ ನ್ಯೂಸ್ ಗಳನ್ನು ನಿಯಂತ್ರಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿತು. ಅಲ್ಲದೆ ಈ ವಿಚಾರವಾಗಿ ನ್ಯಾಯಾಂಗ ಸಂಸ್ಥೆಗಳು ಕೂಡ ಕಳವಳ ವ್ಯಕ್ತಪಡಿಸಿರುವ ಬಗ್ಗೆ ಸರ್ಕಾರ ಪ್ರಸ್ತಾಪಿಸಿತು.


 ಹಾಗಾದರೆ ಸರ್ಕಾರಕ್ಕೆ ಆಗಬೇಕಾಗಿದ್ದೇನು?


ಸರ್ಕಾರಕ್ಕೆ ಫೇಕ್ ನ್ಯೂಸ್ ಮೂಲವನ್ನು ಪತ್ತೆ ಹಚ್ಚಬೇಕಾಗಿದೆ ಮತ್ತು ಫೇಕ್ ನ್ಯೂಸ್ ಗಳನ್ನು ನಿಯಂತ್ರಿಸಲು ಸ್ಥಳಿಯವಾಗಿ ಒಂದು ತಂಡವನ್ನು ಅಭಿವೃದ್ದಿ ಪಡಿಸುವ ಅಗತ್ಯವಿದೆ ಎಂದು ಸರ್ಕಾರ ವಾಟ್ಸಪ್ ಬಳಿ ಪ್ರಸ್ತಾಪವಿಟ್ಟಿದೆ.


ಇದಕ್ಕೆ ವಾಟ್ಸಪ್ ನ ಪರಿಹಾರ ಮಾರ್ಗವೇನು? ಮತ್ತು ಅದು ನಿರಾಕರಿಸುವುದಕ್ಕೆ ಕಾರಣವೇನು ?


ವಾಟ್ಸಪ್ ಇದುವರೆಗೆ ತಾನು ಹೆಮ್ಮೆ ಪಟ್ಟುಕೊಳ್ಳುತ್ತಿರುವುದು ಬಳಕೆದಾರರ ಪ್ರೈವಸಿ ರಕ್ಷಣೆಯ ಕಾರಣಕ್ಕಾಗಿ ಇದು ಅದರ ಯಶಸ್ಸಿನ ಅಂಶಗಳಲ್ಲಿಯೂ ಸಹ ಒಂದು. ಆದ್ದರಿಂದ ಒಂದು ವೇಳೆ ಸುದ್ದಿ ಮೂಲವನ್ನು ಪತ್ತೆ ಹಚ್ಚಿದ್ದೆ ಆದಲ್ಲಿ ಅದು ವ್ಯಾಟ್ಸಪ್ ನ ಮೂಲ ಅಂಶಕ್ಕೆ ಪೆಟ್ಟು ಬಿಳಲಿದೆ. ಆದ್ದರಿಂದ ಅದು ಸರ್ಕಾರದ ಬೇಡಿಕೆಯನ್ನು ತಿರಸ್ಕರಿಸಿದೆ.ಈ ಕಾರಣಕ್ಕಾಗಿ ಈಗ ವಾಟ್ಸಪ್ ಮತ್ತು ಕೇಂದ್ರ ಸರ್ಕಾರದ ನಡುವೆ ಈ ಸಮರ ಇನ್ನು ಮುಂದುವರೆದಿದೆ. ಇದಕ್ಕೆ ಇನ್ನು ಪರಿಹಾರ ಕಾಣುವ ಸಾಧ್ಯತೆಗಳು ಕಾಣುತ್ತಿಲ್ಲ ಎಂದು ಹೇಳಲಾಗಿದೆ.