ನವದೆಹಲಿ: ಕೇಸು ಹಂಚಿಕೆಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಮಾಧ್ಯಮದ ಮುಂದೆ ಗಂಭೀರ ಆರೋಪ‌ ಮಾಡಿದ ನಾಲ್ವರು ನ್ಯಾಯಮೂರ್ತಿಗಳನ್ನು ಹೊರತುಪಡಿಸಿದ ಸಂವಿಧಾನಿಕ ಪೀಠವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ರಚಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ಈ ನಡೆಯಿಂದ ಈಗಾಗಲೇ ಹುಟ್ಟಿಕೊಂಡಿರುವ ಬಿಕ್ಕಟ್ಟು ಬಗೆಹರಿಯುವ ಬದಲು ಮತ್ತಷ್ಟು ಬಿಗಡಾಯಿಸುತ್ತದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ನಾಲ್ಕು ದಿನಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟಿನ  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ರಂಜನ್ ಗೋಗಾಯ್, ಚಲಮೇಶ್ವರ್, ಎಂ.ಬಿ. ಲೋಕರ್ ಮತ್ತು ಕುರಿಯನ್‌ ಜೋಸೆಫ್  ಬಂಡೆದ್ದಿದ್ದರು‌. ಪತ್ರಿಕಾಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕೇಸುಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆಪಾದಿಸಿದ್ದರು. ಈ ಘಟನೆಯನ್ನು ನ್ಯಾಯಾಂಗದ ಇತಿಹಾಸದಲ್ಲಿ ಮೊದಲ ಭಾರಿಗೆ ನ್ಯಾಯಮೂರ್ತಿಗಳ ನಡುವಣ ಜಗಳ ಬೀದಿಗೆ ಪ್ರಕರಣ ಎಂದು ಹೇಳಲಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುವ ನಿಟ್ಟಿನಲ್ಲಿ ಭಾರತೀಯ ವಕೀಲರ ಪರಿಷತ್ತು ಏಳು ಮಂದಿ ಹಿರಿಯ ವಕೀಲರ ಸಮಿತಿಯನ್ನು ರಚಿಸಿತ್ತು. ಸಮಿತಿ ಮೊನ್ನೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನಾಲ್ವರು ಬಂಡಾಯ ನ್ಯಾಯಮೂರ್ತಿಗಳನ್ನು ಭೇಟಿಮಾಡಿ ಚರ್ಚಿಸಿತ್ತು.‌ ಸಮಿತಿಯ ಈ ಪ್ರಯತ್ನದಿಂದ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿದ್ದವು ಎನ್ನುವ ವೇಳೆಯಲ್ಲೇ ಸೋಮವಾರ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಈ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು‌ ಹೊರತುಪಡಿಸಿ ತಮ್ಮದೇ ನೇತೃತ್ವದಲ್ಲಿ ನಾಲ್ವರು ಕಿರಿಯ ನ್ಯಾಯಮೂರ್ತಿಗಳನ್ನು ಸೇರಿಸಿಕೊಂಡು ಸಂವಿಧಾನ‌ ಪೀಠ ರಚಿಸಿದ್ದಾರೆ. ಇದರಿಂದಾಗಿ ಹಿಂದೆ ಬಂಡಾಯ ನ್ಯಾಯಮೂರ್ತಿಗಳು ಮತ್ತು ಮುಖ್ಯ ನ್ಯಾಯಮೂರ್ತಿ ನಡುವಿನ ಬಿರುಕು ಸದ್ಯಕ್ಕೆ ಮುಚ್ಚಲು ಸಾಧ್ಯವಿಲ್ಲದಂತಾಗಿದೆ.


ಹೊಸದಾಗಿ ರಚನೆಯಾಗಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ. ಕಾನ್ವೀಳ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಸಂವಿಧಾನಿಕ ಪೀಠವು ನಾಳೆ‌ (ಜನವರಿ 17) ರಿಂದ ಕಾರ್ಯನಿರ್ವಹಿಸಲಿದೆ.  ಆಧಾರ್, ಕೇರಳದ ಶಬರಿ ಮಲೈ ದೇವಾಸ್ಥಾನಕ್ಕೆ‌ ಮಹಿಳೆಯರಿಗೆ ಪ್ರವೇಶ, ಅಪ್ರಾಪ್ತ ವಯಸ್ಸಿನವರ ಲೈಂಗಿಕ ಪ್ರಕರಣಗಳಂತಹ ಪ್ರಮುಖ ವಿಷಯಗಳನ್ನು ವಿಚಾರಣೆ ನಡೆಸಲಿದೆ.