ದೇಶವ್ಯಾಪಿ ಕಾರ್ಮಿಕರ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ನೌಕರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ಬುಧವಾರ ಕರೆ ನೀಡಿರುವ ದೇಶವ್ಯಾಪಿ ಕಾರ್ಮಿಕರ ಮುಷ್ಕರದಲ್ಲಿ ಭಾಗವಹಿಸುವುದನ್ನು ತಡೆಯಲು ಸರ್ಕಾರ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಕೇಳಿದೆ ಮತ್ತು ಉದ್ಯಮಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆಯನ್ನು ಸಿದ್ಧಪಡಿಸುವಂತೆ ಅವರಿಗೆ ಸೂಚಿಸಿದೆ.
ನವದೆಹಲಿ: ಬುಧವಾರ ಕರೆ ನೀಡಿರುವ ದೇಶವ್ಯಾಪಿ ಕಾರ್ಮಿಕರ ಮುಷ್ಕರದಲ್ಲಿ ಭಾಗವಹಿಸುವುದನ್ನು ತಡೆಯಲು ಸರ್ಕಾರ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಕೇಳಿದೆ ಮತ್ತು ಉದ್ಯಮಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆಯನ್ನು ಸಿದ್ಧಪಡಿಸುವಂತೆ ಅವರಿಗೆ ಸೂಚಿಸಿದೆ.
ಕೇಂದ್ರ ಸರ್ಕಾರದ 'ಜನ ವಿರೋಧಿ'ನೀತಿಗಳನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಸುಮಾರು 25 ಕೋಟಿ ಜನರು ಭಾಗವಹಿಸಲಿದ್ದಾರೆ ಎಂದು ಹತ್ತು ಕೇಂದ್ರ ಕಾರ್ಮಿಕ ಸಂಘಗಳು ತಿಳಿಸಿವೆ. ಕಾರ್ಮಿಕ ಸಂಘಗಳಾದ ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಸೆವಾ, ಎಐಸಿಸಿಟಿಯು, ಎಲ್‌ಪಿಎಫ್, ಯುಟಿಯುಸಿ ಜೊತೆಗೆ ವಿವಿಧ ವಲಯದ ಸ್ವತಂತ್ರ ಒಕ್ಕೂಟಗಳು ಮತ್ತು ಸಂಘಗಳು ಜನವರಿ 8 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಣೆಯನ್ನು ಅಂಗೀಕರಿಸಿದ್ದವು.
'ಪ್ರತಿಭಟನೆ ಸೇರಿದಂತೆ ಯಾವುದೇ ರೂಪದಲ್ಲಿ ಮುಷ್ಕರ ನಡೆಸುವ ಯಾವುದೇ ನೌಕರನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಇದು ವೇತನವನ್ನು ಕಡಿತಗೊಳಿಸುವುದರ ಜೊತೆಗೆ ಸೂಕ್ತ ಶಿಸ್ತು ಕ್ರಮವನ್ನೂ ಸಹ ಒಳಗೊಂಡಿರಬಹುದು" ಎಂದು ಸರ್ಕಾರ ಹೊರಡಿಸಿದ ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.ಪ್ರಸ್ತಾವಿತ ಪ್ರತಿಭಟನೆ ಅಥವಾ ಮುಷ್ಕರ ಅವಧಿಯಲ್ಲಿ ಅರ್ಜಿ ಸಲ್ಲಿಸಿದರೆ ನೌಕರರಿಗೆ ಕ್ಯಾಶುಯಲ್ ರಜೆ ಅಥವಾ ಇತರ ರೀತಿಯ ರಜೆಗಳನ್ನು ಮಂಜೂರು ಮಾಡದಂತೆ ಸೂಚನೆಗಳನ್ನು ನೀಡಿದೆ.
ಕೇಂದ್ರ ಕಾರ್ಮಿಕ ಸಂಘಗಳು ಕಾರ್ಮಿಕ ಸುಧಾರಣೆಗಳು, ಎಫ್‌ಡಿಐ, ಹೂಡಿಕೆ, ಕಾರ್ಪೊರೈಸೇಶನ್ ಮತ್ತು ಖಾಸಗೀಕರಣ ನೀತಿಗಳ ವಿರುದ್ಧ ಪ್ರತಿಭಟಿಸುತ್ತಿವೆ ಮತ್ತು ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಕಾರ್ಮಿಕ ವರ್ಗದ 12 ಅಂಶಗಳ ಸಾಮಾನ್ಯ ಬೇಡಿಕೆಗಳಿಗೆ ಒತ್ತಾಯಿಸುತ್ತಿವೆ.