ಮುಂಬೈ: ನಿರಂತರ ಸ್ಥಗಿತ, ರಾಜಕೀಯ ಕೋಲಾಹಲ, ಪಕ್ಷ ಬದಲಾವಣೆ ಮತ್ತು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಎಲ್ಲದರ ನಂತರ, ಅಂತಿಮವಾಗಿ ಮಹಾರಾಷ್ಟ್ರ ವಿಧಾನಸಭೆಯು ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಉದ್ಧವ್ ಠಾಕ್ರೆ ಬಾಲಾ ಸಾಹೇಬ್ ಠಾಕ್ರೆ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವ ದೃಷ್ಟಿಕೋನದಿಂದ ನೋಡುತ್ತಿದ್ದರೆ, ಬಿಜೆಪಿಯೂ ಕೌರ್‌ಗೆ ಹೋಗುವ ತರ್ಕದಿಂದ ಅದನ್ನು ನೋಡುತ್ತಿದೆ. ಸರಿಸುಮಾರು ತಿಂಗಳಿನಿಂದ ನಡೆಯುತ್ತಿರುವ ಘಟನೆಗಳಲ್ಲಿ ಮಹತ್ವದ ತಿರುವು ಬಂದಿದ್ದು, ಶನಿವಾರ ಮುಂಜಾನೆ ಸತತ ಎರಡನೇ ಬಾರಿಗೆ ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವೀಸ್(Devendra Fadnavis) ಮೂರೂವರೆ ದಿನಗಳಲ್ಲಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.


COMMERCIAL BREAK
SCROLL TO CONTINUE READING

ಫಡ್ನವೀಸ್ ಅವರಿಗೆ ಮತ್ತೆ ಅಧಿಕಾರ, ಆದರೆ...
ರಾತ್ರೋರಾತ್ರಿ ಏನೆಲ್ಲಾ ಬೆಳವಣಿಗೆಗಳಾಗಬಹುದು. ನಸುಕಿನಲ್ಲೇ ಸರ್ಕಾರವೊಂದು ಕಣ್ಣು ಬಿಡಬಹುದು. ಚುನಾವಣಾ ಪೂರ್ವ ಮೈತ್ರಿ ಪುಡಿಪುಡಿಯಾಗಬಹುದು. ಚುನಾವಣೋತ್ತರ ಮೈತ್ರಿ ಹತ್ತಿಕ್ಕಲು ಷಡ್ಯಂತ್ರ ನಡೆಯಬಹುದು. ಈ ಎಲ್ಲಾ ಚಮತ್ಕಾರಗಳ ನಡುವೆಯೂ ದೇಶದ ಜನ ನಿರೀಕ್ಷೆ ಇಟ್ಟುಕೊಂಡಿರುವುದು ನ್ಯಾಯಾಂಗದ ಮೇಲೆ. ದೇಶದ ಅತಿ ಎತ್ತರದ ನ್ಯಾಯಾಲಯದ ಎದುರು ಇಂಥದೊಂದು ಪ್ರಸಂಗ ಬಂದಿದ್ದು ಎಲ್ಲರೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಡೆಗೆ ನೋಡುತ್ತಿದ್ದಾರೆ. ತೀರ್ಪಿನ ಬಗ್ಗೆ ನಿರೀಕ್ಷೆಯೂ ಜಾಸ್ತಿ, ಅದು ಉಕ್ಕಿಸುವ ಸಂಚಲನವೂ ಜಾಸ್ತಿ. ತಿಂಗಳು ಪೂರ್ತಿ ಕನಸು ಕಂಡು ಎಲ್ಲರೂ ಕಣ್ಣು ಬಿಡುವ ವೇಳೆ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್(Devendra Fadnavis) ಮಂಗಳವಾರ ಸುಪ್ರೀಂಕೋರ್ಟ್ ಬುಧವಾರ ಸಂಜೆ 5 ಗಂಟೆಯೊಳಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಬಹುಮತ ಸಾಬೀತು ಪಡಿಸಬೇಕು ಎಂದು ತೀರ್ಪು ಹೊರಬಂದ ಕೆಲವೇ ಗಂಟೆಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿದರು. ಆದರೆ, ಮುಖ್ಯಮಂತ್ರಿಯಾಗಿ ಕೆಲವೇ ಗಂಟೆಗಳಲ್ಲಿ ಅಧಿಕಾರದಿಂದ ಕೆಳಗಿಳಿದವರಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮೊದಲಿಗರೇನಲ್ಲ. ವಿರೋಧ-ಸಮರ್ಥನೆ ಮತ್ತು ನಂಬಿಕೆ ಮುಂತಾದ ಪದಗಳನ್ನು ಆಧರಿಸಿ ಈ ಹಿಂದೆಯೂ ಹಲವು ಸರ್ಕಾರಗಳು ವಾರದೊಳಗೆ, ಅಷ್ಟೇ ಏಕೆ ಒಂದೆರಡು ದಿನಗಳಲ್ಲಿ ಕುಸಿದಿರುವ ಹಲವು ಉದಾಹರಣೆಗಳಿವೆ. 


ಜಗದಂಬಿಕಾ ಪಾಲ್: 3 ದಿನಗಳು
ಅದು 1998 ರ ವರ್ಷ. ಅದೇ ವರ್ಷ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ರಾಜಕೀಯ ನಾಟಕವೊಂದು ನಡೆದಿತ್ತು. ನಂತರ ಯುಪಿ ಗವರ್ನರ್ ರೋಮೇಶ್ ಭಂಡಾರಿ, ಕಲ್ಯಾಣ್ ಸಿಂಗ್ ಅವರನ್ನು ವಜಾ ಮಾಡಿ ಫೆಬ್ರವರಿ 21 ರಂದು ಜಗದಾಂಬಿಕಾ ಪಾಲ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದ್ದರು. ಕಲ್ಯಾಣ್ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಫೆಬ್ರವರಿ 23 ರಂದು ನ್ಯಾಯಾಲಯದ ಹಸ್ತಕ್ಷೇಪದ ನಂತರ ಜಗದಾಂಬಿಕಾ ಪಾಲ್ ಮೂರೇ ದಿನಗಳಲ್ಲಿ ರಾಜೀನಾಮೆ ನೀಡಬೇಕಾಯಿತು.


ಬಿ.ಎಸ್.ಯಡಿಯೂರಪ್ಪ(BS Yediyurappa): 3 ದಿನ 
ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ರಾಜಕೀಯ ನಾಟಕ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಬಿ.ಎಸ್. ಯಡಿಯೂರಪ್ಪ(BS Yediyurappa) ಅವರು ಮೇ 17 ರಂದು ಬಹುಮತವಿಲ್ಲದೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಅವರು ಸದನದಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನವೇ ಮೇ 19 ರಂದು ರಾಜೀನಾಮೆ ನೀಡಿದರು. ಆ ಮೂಲಕ ಕೇವಲ 55 ಗಂಟೆಗಳ ಅವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು. ಬಿಜೆಪಿ ನಾಯಕ ಯಡಿಯೂರಪ್ಪ ಹೀಗೆ ಅಧಿಕಾರ ವಹಿಸಿಕೊಂಡು ವಾರದೊಳಗೆ ರಾಜೀನಾಮೆ ನೀಡಿದ್ದು ಇದು ಮೊದಲೇನಲ್ಲ. 2007 ರಲ್ಲಿ, ಅವರು ಜುಲೈ 12 ರಂದು ಪ್ರಮಾಣವಚನ ಸ್ವೀಕರಿಸಿದ್ದ ಅವರು ಜುಲೈ 17 ರಂದು ರಾಜೀನಾಮೆ ನೀಡಿದ್ದರು.


ಓಂ ಪ್ರಕಾಶ್ ಚೌಟಾಲ: 6 ದಿನಗಳು
ಹರಿಯಾಣದ ಹಿರಿಯ ನಾಯಕ ಓಂ ಪ್ರಕಾಶ್ ಚೌಟಾಲ ಅವರು ಜುಲೈ 12, 1990 ರಂದು ಮತ್ತೆ ಸಿಎಂ ಆಗಿ ಆಯ್ಕೆಯಾದರು. ಆದರೆ ಜುಲೈ 17 ರಂದು ಅವರು ರಾಜೀನಾಮೆ ನೀಡಬೇಕಾಯಿತು. ಇವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದದ್ದು ಕೇವಲ 6 ದಿನಗಳು ಮಾತ್ರ.


8 ದಿನಗಳ ಸಿಎಂ ಆಗಿದ್ದ ನಿತೀಶ್ ಕುಮಾರ್;
ಸುಮಾರು 19 ವರ್ಷಗಳ ಹಿಂದೆ ಬಿಹಾರದಲ್ಲಿ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ನಿತೀಶ್ ಕುಮಾರ್ 2000 ನೇ ಇಸವಿಯಲ್ಲಿ  ವಿಶ್ವಾಸಮತ ಯಾಚನೆಗೂ ಮೊದಲೇ ರಾಜೀನಾಮೆ ನೀಡಿದರು. ಅವರು 8 ಶಾಸಕರಿಗಿಂತ ಕಡಿಮೆ ಬಹುಮತ ಹೊಂದಿದ್ದರೂ ಮಾರ್ಚ್ 3 ರಂದು ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಮಾರ್ಚ್ 10 ರಂದು ರಾಜೀನಾಮೆ ನೀಡಬೇಕಾಯಿತು.


12 ದಿನದಲ್ಲಿ ರಾಜೀನಾಮೆ ನೀಡಿದ್ದ ಎಸ್‌ಸಿ ಮಾರ್ಕ್
1998 ರಲ್ಲಿ ಮೇಘಾಲಯ ಮುಖ್ಯಮಂತ್ರಿ ಎಸ್.ಸಿ.ಮಾರ್ಕ್ ಅವರ ಸರ್ಕಾರವು ಕೇವಲ 12 ದಿನಗಳಲ್ಲಿ ಕುಸಿದಿತ್ತು. ಫೆಬ್ರವರಿ 27 ರಂದು ಪ್ರಮಾಣವಚನ ಸ್ವೀಕರಿಸಿ ಅವರು ಮಾರ್ಚ್ 10 ರಂದು ರಾಜೀನಾಮೆ ನೀಡಿದ್ದರು. ಇದಲ್ಲದೆ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರು ರಾಜ್ಯದ ಮೊದಲ ಸಿಎಂ ಆಗಲು ಬಯಸಿದ್ದರು, ಆದರೆ ಅವರ ಕನಸು ನನಸಾಗಲಿಲ್ಲ. 2005 ರಲ್ಲಿ ಕೂಡ ಅವರು ಮಾರ್ಚ್ 2 ರಿಂದ ಮಾರ್ಚ್ 12 ರವರೆಗೆ ಹತ್ತು ದಿನಗಳ ಕಾಲ ಸಿಎಂ ಆಗಿದ್ದರು. ಬಳಿಕ ರಾಜೀನಾಮೆ ನೀಡಬೇಕಾಯಿತು.


ಹಾಗೆಯೇ ಕನಿಷ್ಠ ಎರಡು ತಿಂಗಳೂ ಕೂಡ ಅಧಿಕಾರ ಅನುಭವಿಸದ ಹಲವು ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ:
ಮುಖ್ಯಮಂತ್ರಿ ಹೆಸರು ವರ್ಷ ಅವಧಿ
ಜಗದಾಂಬಿಕಾ ಪಾಲ್     1998    24 ಗಂಟೆ(ಉತ್ತರ ಪ್ರದೇಶ)

 


ಬಿ.ಎಸ್.ಯಡಿಯೂರಪ್ಪ

2018 3 ದಿನ (ಕರ್ನಾಟಕ)
ಬಿ.ಎಸ್.ಯಡಿಯೂರಪ್ಪ 2007 8 ದಿನ (ಕರ್ನಾಟಕ)
ಸತೀಶ್ ಪ್ರಸಾದ್ ಸಿಂಗ್   1968 5 ದಿನ (ಬಿಹಾರ)
ಶಿಬು ಸೊರೆನ್ 2005 9 ದಿನ (ಜಾರ್ಖಂಡ್)
ಬಿಪಿ ಮಂಡಲ್  1968 31 ದಿನ (ಬಿಹಾರ)
ಓಂ ಪ್ರಕಾಶ್ ಚೌಟಾಲ  1990 5 ದಿನ (ಹರಿಯಾಣ)
ಓಂ ಪ್ರಕಾಶ್ ಚೌಟಾಲ 1991 4 ದಿನ(ಹರಿಯಾಣ)
ಎಸ್‌ಸಿ ಮಾರ್ಕ್  1998 3 ದಿನ (ಮೇಘಾಲಯ)
ಜಾನಕಿ ರಾಮಚಂದ್ರನ್ 1988 23 ದಿನ (ತಮಿಳುನಾಡು)
ಸಿ.ಎಚ್ ಮೊಹಮ್ಮದ್ ಕೋಯಾ  9 45 ದಿನ (ಕೇರಳ)