ನವದೆಹಲಿ: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್  ಕೋವಿಂದ್, ದೇಶದ ನಾಗರಿಕರಿಗೆ 72ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ತಮ್ಮ ಭಾಷಣ ಆರಂಭಿಸಿದರು. 72ನೇ ಸ್ವಾತಂತ್ರ್ಯೋತ್ಸವನ್ನ ನಾಳೆ ನಾವು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನಿಗೂ ಪವಿತ್ರವಾದ ದಿನ. ನಮ್ಮ ತ್ರಿವಣ ಧ್ವಜ ದೇಶದ ಅಸ್ಮಿತೆಯ ಪ್ರತೀಕ ಎಂದು ಅವರು ತಿಳಿಸಿದರು.


COMMERCIAL BREAK
SCROLL TO CONTINUE READING

ನಮ್ಮ ಹಿರಿಯರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ.  ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ದೇಶ ಭಕ್ತರಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಮಹಾನ್ ದೇಶಭಕ್ತರ ಬಳುವಳಿ ದೊರೆತ ನಾವೇ ಭಾಗ್ಯವಂತರು. ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಬಲಿದಾನ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದಿಂದಾಗಿ ನಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಅವರ ಬಲಿದಾನವನ್ನು ನಾವು ಸ್ಮರಿಸಿಕೊಳ್ಳುತ್ತಿದ್ದೇವೆ. ನಾವು ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ಸಾಗಬೇಕಿದೆ ಎಂದ ರಾಷ್ಟ್ರಪತಿ ಕೋವಿಂದ್, ರಾಷ್ಟ್ರದ ಅಭಿವೃದ್ಧಿಗಾಗಿ ಎಲ್ಲರೂ ಪಣ ತೊಡಬೇಕಿದೆ. ದೇಶದಲ್ಲಿ ನಿರುದ್ಯೋಗ ತೊಲಗಿಸಿ, ಬಡತನ ನಿವಾರಣೆ ಆಗಬೇಕಿದೆ. ರಾಷ್ಟ್ರದ ಅಭಿವೃದ್ಧಿಗೆ ಎಲ್ಲರೂ ಸಂಕಲ್ಪ ಮಾಡೋಣ ಎಂದರು.


ನಾವು ಗಾಂಧೀಜಿಯ ಮಕ್ಕಳು. ನಾವು ಒಬ್ಬಂಟಿಯಾಗಿ ನಡೆಯುವಾಗಲೂ ಮಾನವೀಯತೆಯ ಕನಸು ಕಾಣುತ್ತೇವೆ. ಅಹಿಂಸೆ ಅನ್ನೋ ಅಸ್ತ್ರ ನೀಡಿರುವ ಗಾಂಧೀಜಿಯ ಆಲೋಚನೆಗಳ ಆಳವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅವರು ರಾಜಕೀಯ ಮತ್ತು ಸ್ವಾತಂತ್ರ್ಯದ ಬಗ್ಗೆ ಸೀಮಿತ ವ್ಯಾಖ್ಯಾನಗಳನ್ನು ನೀಡಿರಲಿಲ್ಲ. ಈಬಾರಿ ನಾವು ಅಕ್ಟೋಬರ್ 2ರಂದು ಗಾಂಧೀಜಿಯವರ 150 ನೇ ಜನ್ಮದಿನೋತ್ಸವವನ್ನು ಆಚರಿಸುತ್ತಿದ್ದೇವೆ. ಹಾಗಾಗಿ ನಾವೆಲ್ಲರೂ ಅವರ ಆಲೋಚನೆಗಳು ಮತ್ತು ತತ್ವಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ರಾಷ್ಟ್ರಪತಿ ತಿಳಿಸಿದರು.


ಅನೇಕ ಆಫ್ರಿಕನ್ ದೇಶಗಳಿಗೆ ಹವಾಮಾನ ಬದಲಾವಣೆ, ವಿಶ್ವ ಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಕಣೆ ಸೇರಿದಂತೆ ಅನೇಕ ಕಾರ್ಯಗಳಿಗೆ ನೆರವು ನೀಡುವ ಮೂಲಕ ನಾವು ನಮ್ಮ ಕಾಳಜಿಯನ್ನು ಪ್ರದರ್ಶಿಸುತ್ತೇವೆ. ಅಷ್ಟೇ ಅಲ್ಲದೆ, ನೈಸರ್ಗಿಕ ವಿಕೋಪಗಳಿಂದ ಬಳಲುತ್ತಿರುವ ನೆರೆಯ ದೇಶಗಳಿಗೆ ಸಹಾಯ ಮಾಡುತ್ತೇವೆ. ನಮ್ಮ ಯುವಜನಾಂಗದ ಆದರ್ಶಗಳು, ಭಾವನೆಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪ್ರತಿಯೊಬ್ಬರಲ್ಲಿಯೂ ತಮಗಾಗಿ, ತಮ್ಮ ಕುಟುಂಬಕ್ಕಾಗಿ, ಸಮಾಜಕ್ಕಾಗಿ ಮತ್ತು ಇಡೀ ರಾಷ್ಟ್ರಕ್ಕಾಗಿ ಏನನ್ನಾದರೂ ಸಾಧಿಸಬೇಕೆಂಬ ಛಲ, ಉತ್ಸಾಹವಿದೆ. ಇದೇ ನಾವು ಆಶಿಸುವ ನೈತಿಕ ಶಿಕ್ಷಣವಾಗಿದೆ ಎಂದರು.