ಹಜ್ ಯಾತ್ರೆಗೆ ಯಾವುದೇ ಸಬ್ಸಿಡಿ ಇಲ್ಲ- ಕೇಂದ್ರ ಸರ್ಕಾರ
ಅಲ್ಪಸಂಖ್ಯಾತರ ಶಿಕ್ಷಣ, ವಿಶೇಷವಾಗಿ ಬಾಲಕಿಯರ ಶಿಕ್ಷಣಕ್ಕಾಗಿ ಹಜ್ ಸಬ್ಸಿಡಿ ನಿಧಿಗಳನ್ನು ಬಳಸಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
ನವದೆಹಲಿ: ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹಜ್ ಯಾತ್ರೆ ಯ ಸಬ್ಸಿಡಿಯನ್ನು ನಿರ್ಮೂಲನೆ ಮಾಡಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಈ ವರ್ಷದಲ್ಲಿ ಅತಿ ಹೆಚ್ಚು ಅಂದರೆ ಸುಮಾರು 1.75 ಮಿಲಿಯನ್ ಮುಸಲ್ಮಾನರು ಹಜ್ ಯಾತ್ರೆಗೆ ತೆರಳುತ್ತಿದ್ದಾರೆ. ಸಬ್ಸಿಡಿಯನ್ನು ತೆಗೆಯುವುದು ಹಜ್ ಪ್ರಯಾಣದ ವೆಚ್ಚದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.
ಮುಂದುವರೆದು ಮಾತನಾಡಿದ ಸಚಿವರು "ಹಜ್ ಸಬ್ಸಿಡಿ ನಿಧಿಗಳನ್ನು ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಬಳಸಲಾಗುವುದು" ಎಂದು ಹೇಳಿದರು.
2017 ರಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಹಜ್ ನೀತಿಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತು ಮತ್ತು ಸಮಿತಿಯು 2018-22ರ ಹೊಸ ಹಜ್ ನೀತಿಯ ಚೌಕಟ್ಟನ್ನು ಸೂಚಿಸುತ್ತದೆ.
"ಸುಪ್ರೀಂ ಕೋರ್ಟ್ನ ಸಂವಿಧಾನಾತ್ಮಕ ಪೀಠವು 2012 ರಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಜ್ ಸಬ್ಸಿಡಿಯನ್ನು ದೂರವಿರಿಸಬೇಕೆಂದು ಆದೇಶಿಸಿತು, ಆದ್ದರಿಂದ ಹೊಸ ನೀತಿಯಲ್ಲಿ, ಸಮಿತಿಯ ಶಿಫಾರಸುಗಳ ಪ್ರಕಾರ, ನಾವು ಹಜ್ ಸಬ್ಸಿಡಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಿದ್ದೇವೆ" ಎಂದು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.