ಮುಂದಿನ 15 ದಿನಗಳಲ್ಲಿ ಐದು ದಿನ ಬ್ಯಾಂಕುಗಳಿಗೆ ರಜೆ; ಎಲ್ಲೆಲ್ಲಿ ಯಾವಾಗ ಬ್ಯಾಂಕ್ ರಜೆ ಎಂದು ತಿಳಿಯಿರಿ
ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳಿಗೆ ರಜೆ ಇರುತ್ತದೆ. ಮೊದಲನೇ, ಮೂರನೇ ಮತ್ತು ಐದನೇ ಶನಿವಾರದಂದು ಬ್ಯಾಂಕುಗಳು ತೆರೆದಿರುತ್ತವೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಾವು ಹಲವು ಬ್ಯಾಂಕ್ ವ್ಯವಹಾರಗಳನ್ನು ಆನ್ಲೈನ್ ಮೂಲಕವೇ ಮಾಡುತ್ತೇವೆ. ಆದರೂ ಕೆಲವೊಮ್ಮೆ ಕೆಲವು ಮುಖ್ಯವಾದ ಕೆಲಸಗಳಿಗೆ ಬ್ಯಾಂಕಿಗೆ ಹೋಗುವುದು ಅನಿವಾರ್ಯವಾಗಿರುತ್ತದೆ. ಸಾಕಷ್ಟು ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಬ್ಯಾಂಕಿಗೆ ಹೋದಾಗ ಬ್ಯಾಂಕ್ ರಜೆ ಇದ್ದರೆ. ಅಂತಹ ಪರಿಸ್ಥಿತಿಯಲ್ಲಿ ಯಾರಿಗಾದರೂ ಕೋಪ ಬಂದೇ ಬರುತ್ತದೆ. ಇದಕ್ಕೆ ಒಳ್ಳೆಯ ಉಪಾಯ ಎಂದರೆ ನಾವು ಬ್ಯಾಂಕ್ ಕೆಲಸಕ್ಕೆಂದು ಸಮಯ ಮಾಡಿಕೊಳ್ಳುವಾಗಲೇ ಆ ದಿನ ಬ್ಯಾಂಕ್ ಕೆಲಸದ ದಿನವೇ ಅಥವಾ ರಜಾ ದಿನವೇ ಎಂಬುದನ್ನೂ ಕೂಡ ಗಮನಿಸುವುದು.
ಈ ತಿಂಗಳಲ್ಲಿ ಬ್ಯಾಂಕಿಗೆ ಯಾವಾಗ ರಜೆ ಇದೇ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಮುಂದಿನ 15 ದಿನಗಳಲ್ಲಿ 5 ದಿನ ಬ್ಯಾಂಕಿಗೆ ರಜೆ ಇರಲಿದೆ. ನಾಳೆ ಆಗಸ್ಟ್ 15 (ಗುರುವಾರ) ಸ್ವಾತಂತ್ರ್ಯ ದಿನಾಚರಣೆ, ರಕ್ಷಾಬಂಧನ್. ಸ್ವಾತಂತ್ರ್ಯ ದಿನದಂದು ರಾಷ್ಟ್ರೀಯ ರಜಾದಿನ ಆಗಿರುವುದರಿಂದ ಬ್ಯಾಂಕ್ ಗಳಿಗೂ ರಜೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಕಚೇರಿಗಳು ಮುಚ್ಚಲ್ಪಡುತ್ತವೆ. ಈ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ನಿಮಗೆ ನೀಡುತ್ತೇವೆ.
1. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ ಮತ್ತು ರಾಖಿ ರಜೆ.
2. ಆಗಸ್ಟ್ 17 ತಿಂಗಳ ಮೂರನೇ ಶನಿವಾರ. ಆದ್ದರಿಂದ, ಬ್ಯಾಂಕುಗಳಲ್ಲಿ ಯಾವುದೇ ರಜಾದಿನಗಳು ಇರುವುದಿಲ್ಲ. ಆದರೆ, ಆ ದಿನ ಪಾರ್ಸಿ ಹೊಸ ವರ್ಷವಾದ್ದರಿಂದ ಮಹಾರಾಷ್ಟ್ರದ ಹೆಚ್ಚಿನ ಭಾಗಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅದೇ ಸಮಯದಲ್ಲಿ ದೆಹಲಿ, ಬೆಂಗಳೂರು, ಚೆನ್ನೈ ಮುಂತಾದ ಮಹಾನಗರಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
3. ಆಗಸ್ಟ್ 20 ರಂದು ಶ್ರೀ ಶ್ರೀ ಮಾಧವ್ ದೇವ್ ಪೂಜಾ ಇರುವುದರಿಂದ ಆ ದಿನ ಅಸ್ಸಾಂನ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
4. ಇದಲ್ಲದೆ, ಆಗಸ್ಟ್ 23 ಮತ್ತು 24 ರಂದು ಕೃಷ್ಣ ಜನ್ಮಾಷ್ಟಮಿಯಿಂದಾಗಿ ಬ್ಯಾಂಕುಗಳನ್ನು ಮುಚ್ಚಬಹುದು. ಆದಾಗ್ಯೂ, ಆಗಸ್ಟ್ 24 ತಿಂಗಳ ನಾಲ್ಕನೇ ಶನಿವಾರ ಸಹ ಹೌದು. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
5. ಆಗಸ್ಟ್ 31 ತಿಂಗಳ ಐದನೇ ಶನಿವಾರದಂದು ಬರುತ್ತದೆ, ಆದ್ದರಿಂದ ಬ್ಯಾಂಕುಗಳು ಮುಚ್ಚಲ್ಪಡುವುದಿಲ್ಲ. ಆದಾಗ್ಯೂ, ಗುರು ಗ್ರಂಥ ಸಾಹಿಬ್ ಪ್ರಕಾಶ್ ಪರ್ವ್ ಕಾರಣ ಪಂಜಾಬ್ ಮತ್ತು ಹರಿಯಾಣದ ಬ್ಯಾಂಕುಗಳಿಗೆ ರಜೆ ಇರುತ್ತದೆ.