ನವದೆಹಲಿ : ಭಾರತದಲ್ಲಿ 31 ಮುಖ್ಯಮಂತ್ರಿಗಳ ಪೈಕಿ 25 ಮಂದಿ ಕೋಟ್ಯಾಧಿಪತಿಗಳಿದ್ದಾರೆ. ಇವರಲ್ಲಿ ಇಬ್ಬರು 100 ಕೋಟಿ ರೂ.ಗಳ ಆಸ್ತಿಗಳನ್ನೂ ಹೊಂದಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಸೋಮವಾರ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿ ಬಿಡುಗಡೆ ಮಾಡಿದ್ದು, ಶ್ರೀಮಂತ ಮುಖ್ಯಮಂತ್ರಿ, ಬಡ ಮುಖ್ಯಮಂತ್ರಿ, ಕಿರಿಯ ಮತ್ತಿ ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 


ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೊದಲನೇ ಸ್ಥಾನ ಪಡೆದಿದ್ದು, 177 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪಿಮ ಖಂದೂ 129 ಕೋಟಿ ರೂ. ಹೊಂದಿದ್ದರೆ, ಮೂರನೇ ಶ್ರೀಮಂತ ಮುಖ್ಯಮಂತ್ರಿ ಸ್ಥಾನದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಡೆದಿದ್ದು, 48 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಸೋಮವಾರ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿ ಬಿಡುಗಡೆ ಮಾಡಿದೆ.


ಇನ್ನೂ ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ 26 ಲಕ್ಷ ರೂ. ಹೊಂದಿದ್ದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 30 ಲಕ್ಷ ರೂ. ಮತ್ತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ 55 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ವರದಿ ತಿಳಿಸಿದೆ. 


ಭಾರತದ 31 ಮುಖ್ಯಮಂತ್ರಿಗಳ ಸರಾಸರಿ ಆಸ್ತಿಗಳು 16.18 ಕೋಟಿ ರೂ. ಇದೆ. ರಾಜ್ಯ ಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತುತ ಮುಖ್ಯಮಂತ್ರಿಗಳು ಸಲ್ಲಿಸಿರುವ ಆದಾಯ ಆಸ್ತಿವಿವರಗಳನ್ನು ಪರಾಮರ್ಶಿಸಿ ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್(NEW) ಈ ಪಟ್ಟಿ ತಯಾರಿಸಿದೆ. 


ಇನ್ನೂ, ರಾಷ್ಟ್ರದ 31 ಮುಖ್ಯಮಂತ್ರಿಗಳ ಪೈಕಿ 8 ಅಥವಾ ಶೇ.26 ಮಂದಿ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿವೆ. ಇದರಲ್ಲಿ ಕೊಲೆಯ ಪ್ರಕರಣಗಳು, ಕೊಲೆ ಯತ್ನ, ಮೋಸಗಾರಿಕೆ ಮತ್ತು ಆಸ್ತಿಯ ವಿತರಣೆ ಅಪರಾಧದ ಬೆದರಿಕೆ ಇತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದಾರೆ. 


ಅಷ್ಟೇ ಅಲ್ಲದೆ, ರಾಜ್ಯಗಳ ಮುಖ್ಯಸ್ಥರ ಲಿಂಗಾನುಪಾತವನ್ನೂ ಸಹ ಎಡಿಆರ್ ಪಟ್ಟಿ ಮಾಡಿದೆ. 31 ಸಿಎಂಗಳಲ್ಲಿ ಕೇವಲ 3 ಮಹಿಳೆಯರು ಮಾತ್ರ ಸಿಎಂ ಸ್ಥಾನ ಅಲಂಕರಿಸಿದ್ದು, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಪಟ್ಟಿಯಲ್ಲಿಯಲ್ಲಿದ್ದಾರೆ.


ಹಾಗೆಯೇ ಅತಿ ಕಿರಿ ವಯಸ್ಸಿನ ಮುಖ್ಯಮಂತ್ರಿಗಳಲ್ಲಿ ಅರುಣಾಚಲ ಪ್ರದೇಶದ ಪಿಮಾ ಖಂದು(35 ವರ್ಷ) ಮೊದಲನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(44 ವರ್ಷ) 2ನೇ ಸ್ಥಾನದಲ್ಲೂ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (45ವರ್ಷ) ಮೂರನೇ ಸ್ಥಾನದಲ್ಲಿದ್ದಾರೆ. 


ಹಾಗೆಯೇ ಅತಿ ಹಿರಿಯ ಮುಖ್ಯಮಂತ್ರಿಗಳಲ್ಲಿ 74 ವರ್ಷ ವಯಸ್ಸಿನ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, 72 ವರ್ಷದ ಕೇರಳ ಮುಖ್ಯಮಂತ್ರಿ ಪಿನಾರೈ ವಿಜಯನ್ ಮತ್ತು 71 ವರ್ಷ ವಯಸ್ಸಿನ ಮಿಜೋರಾಮ್ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಅವರು ಸ್ಥಾನ ಪಡೆದಿರುವುದಾಗಿ ವರದಿ ತಿಳಿಸಿದೆ. 


ಇನ್ನು, ಶೈಕ್ಷಣಿಕ ಅರ್ಹತೆಯ ವಿಷಯದಲ್ಲಿ, 3 ಸಿ.ಎಂ.ಗಳು 12 ನೇ ತರಗತಿ ಉತ್ತೀರ್ಣರಾದವರಾಗಿದ್ದರೆ, 12 ಮಂದಿ ಪದವೀಧರರು, 10 ಸಿ.ಎಂಗಳು ಪದವಿ ವೃತ್ತಿಪರರು, 5 ಸಿಎಂಗಳು ಸ್ನಾತಕೋತ್ತರ ಪದವೀಧರರು ಮತ್ತು ಕೇವಲ ಓರ್ವ ಸಿಎಂ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.