ಆಗಸ್ಟ್ ನಲ್ಲಿ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ : ತಜ್ಞರಿಂದ ಎಚ್ಚರಿಕೆ ಸಂದೇಶ..!
ಆಗಸ್ಟ್ ನಲ್ಲಿ ಕೊರೊನಾ 3ನೇ ಅಲೆಯು ಅಪ್ಪಳಿಸಲಿದ್ದು, ಸೆಪ್ಟೆಂಬರ್ ನಲ್ಲಿ ಇದು ಗರಿಷ್ಠಮಟ್ಟವನ್ನು ತಲುಪಲಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ.
ನವದೆಹಲಿ : ಕೊರೊನಾ (Coronavirus) ಸಾಂಕ್ರಾಮಿಕದ 2ನೇ ಅಲೆಯ ಹೊಡೆತಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದೆ. ದೇಶಾದ್ಯಂತ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡ ಕೋವಿಡ್-19 ವಿನಾಶಕಾರಿ 2ನೇ ಅಲೆಯ ಸಾವು-ನೋವು ಜನರ ನೆನಪಿನಿಂದ ಮಾಸುವ ಮುನ್ನವೇ ಇದೀಗ 3ನೇ ಅಲೆಯ ಭೀತಿ ಎದುರಾಗಿದೆ. ಇನ್ನೇನು ಜನಜೀವನ ಸಹಜಸ್ಥಿತಿಗೆ ಮರಳುತ್ತಿರುವಂತೆಯೇ ತಜ್ಞರು ಮಹಾಮಾರಿಯ ಬಗ್ಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.
ಆಗಸ್ಟ್ ನಲ್ಲಿ ಕೊರೊನಾ 3ನೇ ಅಲೆಯು (Corona third wave) ಅಪ್ಪಳಿಸಲಿದ್ದು, ಸೆಪ್ಟೆಂಬರ್ ನಲ್ಲಿ ಇದು ಗರಿಷ್ಠಮಟ್ಟವನ್ನು ತಲುಪಲಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ. ‘ಕೋವಿಡ್-19 : ದಿ ರೇಸ್ ಟು ಫಿನಿಶಿಂಗ್ ಲೈನ್’ಎಂದು ಹೆಸರಿಸಲಾಗಿರುವ ಈ ವರದಿಯ ಪ್ರಕಾರ ಕೊರೊನಾ 3ನೇ ಅಲೆಯು 2021ರ ಸೆಪ್ಟೆಂಬರ್ ನಲ್ಲಿ ಗರಿಷ್ಠಮಟ್ಟವನ್ನು ತಲುಪಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಪುತ್ರ ಅಭಿಜಿತ್
COVID-19 2ನೇ ಅಲೆಯು ಭಾರತಕ್ಕೆ ಏಪ್ರಿಲ್ ತಿಂಗಳಿನಲ್ಲಿ ಅಪ್ಪಳಿಸಿತ್ತು ಮತ್ತು ಅದು ಮೇ ತಿಂಗಳಿನಲ್ಲಿ ಗರಿಷ್ಠಮಟ್ಟವನ್ನು ತಲುಪಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು ಎಂದು ಎಸ್‌ಬಿಐ ವರದಿಯು ಉಲ್ಲೇಖಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ (Dehli) , ಮಹಾರಾಷ್ಟ್ರ, ಕೇರಳ ಸೇರಿದಂತೆ ಅನೇಕ ರಾಜ್ಯಗಳು 2ನೇ ಅಲೆಯಿಂದ ತತ್ತರಿಸಿ ಹೋಗಿದ್ದವು. ಸಾವಿರಾರು ಕುಟುಂಬಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿತ್ತು.
ಪ್ರಸಕ್ತ ಮಾಹಿತಿಯ ಪ್ರಕಾರ, ಜುಲೈ 2ನೇ ವಾರದಲ್ಲಿ ಭಾರತದಲ್ಲಿ 10 ಸಾವಿರ ಪ್ರಕರಣಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಆಗಸ್ಟ್ ತಿಂಗಳಿನಲ್ಲಿ ದೇಶದಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗಬಹುದು ಎಂದು ಎಸ್‌ಬಿಐ ವರದಿ ತಿಳಿಸಿದೆ.
ಇದನ್ನೂ ಓದಿ : ಮಾನವ ಹಕ್ಕು ಹೋರಾಟಗಾರ ಸ್ಟಾನ್ ಸ್ವಾಮಿ ಇನ್ನಿಲ್ಲ
ಸೋಮವಾರ ಒಂದೇ ದಿನ ಭಾರತದಲ್ಲಿ 39,796 ಹೊಸ ಕೊರೊನಾ (Coronavirus) ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 723 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 42,352 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 3,05,85,229 ತಲುಪಿದ್ದರೆ, ಸಾವಿನ ಸಂಖ್ಯೆ 4 ಲಕ್ಷಕ್ಕೂ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಇನ್ನೂ 4.82 ಲಕ್ಷ ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಇದುವರೆಗೆ 35 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ (Vaccine) ನೀಡಲಾಗಿದೆ. ಒಂದು ವೇಳೆ ಕೊರೊನಾ 3ನೇ ಅಲೆಯು ಅಪ್ಪಳಿಸಿದರೆ 2ನೇ ಅಲೆಯಂತೆ ಇದು ಕೂಡ ಅಪಾರ ಸಾವು-ನೋವುಗಳಿಗೆ ಸಾಕ್ಷಿಯಾಗಲಿದೆ. ಹೀಗಾಗಿ ಜನಸಾಮಾನ್ಯರು ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದು, ಕಡ್ಡಾಯವಾಗಿ ಮಾಸ್ಕ್ (Mask) ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.