1107 ಕೋಟಿ ರೂ.ಗಳ ಆಸ್ತಿ ಒಡೆಯನಾದ ಈ ಅಭ್ಯರ್ಥಿಗೆ ದಕ್ಕಿದ್ದು ಕೇವಲ 1107 ಮತಗಳು!
ಪಾಟಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಮ್ ಕೃಪಾಲ್ ಯಾದವ್ ಮತ್ತು ಆರ್ಜೆಡಿಯಿಂದ ಸ್ಪರ್ಧಿಸಿದ್ದ ಮೀಸಾ ಭಾರ್ತಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ರಮೇಶ್ ಶರ್ಮಾ ಸ್ಪರ್ಧಿಸಿದ್ದಾರೆ.
ನವದೆಹಲಿ: ಪ್ರಜಾಪ್ರಭುತ್ವದದ ಅತಿ ದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆಯು ಅಂತಿಮ ಹಂತಕ್ಕೆ ತಲುಪಿದ್ದು, ಮತ ಎಣಿಕೆ ಬಹುತೇಕ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಗಳಿಸಿ ದೇಶದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಏತನ್ಮಧ್ಯೆ ಬಿಹಾರದ ಪಾಟಲೀಪುತ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಗ್ಗೆ ಆಶ್ಚರ್ಯಕಾರಿ ವಿಚಾರವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಿಹಾರದ ಪಾಟಲೀಪುತ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮಾ 1107 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಂತೆಯೇ ಈ ಬಾರಿಯ ಮಹಾ ಚುನಾವಣಾ ಸಮರದಲ್ಲಿ ಅವರು ಪಡೆದ ಮತಗಳ ಸಂಖ್ಯೆಯೂ 1107 ಆಗಿರುವುದು ಎಲ್ಲರ ಗಮನ ಸೆಳೆದಿದೆ.
ಲೋಕಸಭೆ ಚುನಾವಣೆಯ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ಏಳನೇ ಶ್ರೀಮಂತ ಅಭ್ಯರ್ಥಿಯಾಗಿರುವ ರಮೇಶ್ ಶರ್ಮಾ ಅವರು 1107 ಕೋಟಿ ಮೌಲ್ಯದ ಸ್ವತ್ತುಗಳನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 11,07,58,33,190 ರೂ.ಗಳಾಗಿವೆ. ಚಾರ್ಟರ್ಡ್ ಎಂಜಿನಿಯರ್ ಪದವಿ ಹೊಂದಿರುವ ಶರ್ಮಾ ಒಂಬತ್ತು ವಾಹನಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ವೋಕ್ಸ್ ವ್ಯಾಗನ್ ಜೆಟ್ಟಾ, ಹೊಂಡಾ ಸಿಟಿ ಮತ್ತು ಆಪ್ಟಾ ಚೆವ್ರೊಲೆಟ್ ಸೇರಿವೆ.
ಪಾಟಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಮ್ ಕೃಪಾಲ್ ಯಾದವ್ ಮತ್ತು ಆರ್ಜೆಡಿಯಿಂದ ಸ್ಪರ್ಧಿಸಿದ್ದ ಮೀಸಾ ಭಾರ್ತಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ರಮೇಶ್ ಶರ್ಮಾ ಸ್ಪರ್ಧಿಸಿದ್ದಾರೆ. ಈವರೆಗೆ ರಾಮ್ ಕೃಪಾಲ್ ಯಾದವ್ ಮುನ್ನಡೆ ಸಾಧಿಸಿದ್ದು, ಮೀಸಾ ಭಾರ್ತಿ ಯಾದವ್ಗೆ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ.