ನವದೆಹಲಿ: ಕೇರಳ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ (ಕೆ-ಫೋನ್) ಯೋಜನೆಯನ್ನು ಪ್ರಕಟಿಸಿದೆ. ಬಡವರಿಗೆ ಉಚಿತ ಇಂಟರ್ನೆಟ್ ಒದಗಿಸುವುದು ಇದರ ಉದ್ದೇಶ. ಈ ವರ್ಷದ ಡಿಸೆಂಬರ್ ವೇಳೆಗೆ ಇದನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದೆ. ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಪಿ.ವಿಜಯನ್ ಶುಕ್ರವಾರ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಅವರು 1,500 ಕೋಟಿ ರೂ.ಗಳ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಕಂಪನಿಗಳ ಒಕ್ಕೂಟದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಬಡವರಿಗೆ ಉತ್ತಮ ಗುಣಮಟ್ಟದ ಉಚಿತ ಇಂಟರ್ನೆಟ್ ಸೇವೆ ನೀಡಲಾಗುವುದು: ವಿಜಯನ್
ಈ ಸಂದರ್ಭದಲ್ಲಿ ಮಾತನಾಡಿರುವ ಸಿಎಂ ವಿಜಯನ್, ಅಂತರ್ಜಾಲ ನಾಗರಿಕ ಮೂಲಭೂತ ಹಕ್ಕು ಎಂದು ಹೇಳಿದ್ದಾರೆ. ಹೀಗಾಗಿ ಇದರದೇ ಒಂದು ಭಾಗವಾಗಿ ಕೆ-ಫೋನ್ ಯೋಜನೆಯನ್ನು ಬಡವರಿಗೆ ಉತ್ತಮ ಗುಣಮಟ್ಟದ ಅಂತರ್ಜಾಲ ಒದಗಿಸಲು ಮತ್ತು ರೈತರಿಗೆ ಕೈಗೆಟಗುವ ದರದಲ್ಲಿ ನೀಡಲು ನಿರ್ಧರಿಸಲಾಗಿದೆ ಅಂದು ಅವರು ಹೇಳಿದ್ದಾರೆ. ಭಾರತದ ಯಾವುದೇ ರಾಜ್ಯ ಇದುವರೆಗೂ ಇಂಥ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.


ಕೊರೊನಾ ವೈರಸ್ ಹಿನ್ನೆಲೆ ಘೋಷಿಸಲಾಗಿರುವ ಲಾಕ್‌ಡೌನ್‌ನಿಂದ ಈ ಯೋಜನೆಯ ಆರಂಭಕ್ಕೆ ವಿಳಂಬವಾಗಿದ್ದರೂ ಕೂಡ ಈ ವರ್ಷದ ಡಿಸೆಂಬರ್ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಕನ್ಸೋರ್ಟಿಯಂ ಮುಖ್ಯಸ್ಥ ಬಿಇಎಲ್ ಸಿಎಂಡಿ ಎಂ.ವಿ.ಗೌತಮ್ ಭರವಸೆ ನೀಡಿದ್ದಾರೆ ಎಂದು ವಿಜಯನ್ ಮಾಹಿತಿ ನೀಡಿದ್ದಾರೆ. ಈ ಒಕ್ಕೂಟವು ಹಲವಾರು ಸಾರ್ವಜನಿಕ ವಲಯದ ಕಂಪನಿಗಳನ್ನು ಒಳಗೊಂಡಿದೆ. ಖಾಸಗಿ ಕಂಪನಿಗಳಾದ ಎಸ್‌ಆರ್‌ಐಟಿ ಮತ್ತು ಎಲ್‌ಎಸ್ ಕೇಬಲ್‌ಗಳ ಜೊತೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ರೈಲ್ಟೆಲ್ ಇದರಲ್ಲಿ ಶಾಮೀಲಾಗಿವೆ.


ಈ ಯೋಜನೆಯನ್ನು ಸ್ಟೇಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಕೆರಳ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್ ಗಳು ಕಾರಯಾನ್ವಿತಗೊಳಿಸಿವೆ. ರಾಜ್ಯದ್ಯಂತ ಇರುವ KSEB ಪೋಸ್ಟ್ ಗಳನ್ನು ಬಳಸಿ ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಅಳವಡಿಸಲಾಗಿದೆ ಎಂದು ವಿಜಯನ್ ಹೇಳಿದ್ದಾರೆ.


ಈ ಕುರಿತು ನಡೆಸಲಾಗಿರುವ ಪತ್ರಿಕಾಗೋಷ್ಠಿಯ ವೇಳೆ ಮಾಹಿತಿ ನೀಡಿರುವ ವಿಜಯನ್, ಈ ಯೋಜನೆ ರಾಜ್ಯದ ಪಾಲಿಗೆ ಲಾಭಕಾರಿಯಾಗಲಿದೆ. K-FON ನೆಟ್ವರ್ಕ್ ರಾಜ್ಯದ ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಕಛೇರಿಗಳು ಹಾಗೂ ಇತರೆ ಸಂಸ್ಥೆಗಳಿಗೆ ಇಂಟರ್ನೆಟ್ ಸೌಕರ್ಯ ಒದಗಿಸಲಿದೆ. ಇದಲ್ಲದೆ ಈಗಾಗಲೇ ರಾಜ್ಯ ನಿರ್ಧರಿಸಿರುವ ಜ್ಞಾನ ಆಧಾರಿತ ಆರ್ಥಿಕ ವ್ಯವಸ್ಥೆಗೆ ಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.


ಕೊವಿಡ್ 19 ನಂತರದ ಕಾಲದಲ್ಲಿ ಇಂಟರ್ನೆಟ್ ಸೇವೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದ್ದು, ಇದರಿಂದ ಶಾಲೆಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರ ಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ..