ದೆಹಲಿ ಚುನಾವಣಾ ಸೋಲಿಗೆ ಇದೇ ಕಾರಣ, ಸತ್ಯ ಒಪ್ಪಿಕೊಂಡ ಅಮಿತ್ ಶಾ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ BJP ಪಕ್ಷ ಕೊನೆಗೂ ತನ್ನ ಸೋಲನ್ನು ಒಪ್ಪಿಕೊಂಡಿದೆ.
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊನೆಗೂ ದೆಹಲಿ ಚುನಾವಣಾ ಫಲಿತಾಂಶದ ಕುರಿತು ತಮ್ಮ ಮೌನ ಮುರಿದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ತಾವು ಹಾಗೂ ತಮ್ಮ ಪಕ್ಷ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ 'ದೇಶದ್ರೋಹಿಗಳನ್ನು ಗುಂಡಿಟ್ಟು ಸಾಯಿಸಿ ಹಾಗೂ ಭಾರತ-ಪಾಕ್ ಯುದ್ಧಗಳಂತಹ ಘೋಷಣೆಗಳನ್ನು ನೀಡಬಾರದಿತ್ತು' ಎಂದಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ ಉಂಟಾಗಿದೆ ಎಂದಿದ್ದಾರೆ.
ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ದೆಹಲಿಯ ರಿಥಾಲಾ ಕ್ಷೇತ್ರದಲ್ಲಿ BJP ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ರೋಚ್ಚಿಗೆಬ್ಬಿಸುವ ಟಿಪ್ಪಣಿ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, "ದೇಶದ ದ್ರೋಹಿಗಳನ್ನು ಗುಂಡಿಕ್ಕಿ.." ಎಂಬ ವಿವಾದಾತ್ಮಕ ಟಿಪ್ಪಣಿ ಮಾಡಿದ್ದರು. ಚುನಾವಣೆಯ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದ BJP ಅಭ್ಯರ್ಥಿ ಕಪಿಲ್ ಮಿಶ್ರಾ, "ಫೆಬ್ರುವರಿ 8ರಂದು ದೆಹಲಿಯಲ್ಲಿ ಭಾರತ-ಪಾಕ್ ನಡುವೆ ಯುದ್ಧ ನಡೆಯಲಿದೆ' ಎಂದಿದ್ದರು.
ಅತ್ತ ಇನ್ನೊಂದೆಡೆ ದೆಹಲಿಯ ಮತ್ತೋರ್ವ BJP ಅಭ್ಯರ್ಥಿ ತಮ್ಮ ಪ್ರಚಾರದ ವೇಳೆ ರಾಷ್ಟ್ರರಾಜಧಾನಿಯಲ್ಲಿ ಸುಮಾರು 500 ಸರ್ಕಾರಿ ಆಸ್ತಿಗಳ ಮೇಲೆ ಮಸೀದಿ ಹಾಗೂ ಸ್ಮಶಾನಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಆಸ್ಪತ್ರೆ ಹಾಗೂ ಶಾಲೆಗಳೂ ಕೂಡ ಶಾಮೀಲಾಗಿವೆ ಎಂದಿದ್ದರು. ಅಷ್ಟೇ ಅಲ್ಲ ಅಕ್ರಮವಾಗಿ ನಿರ್ಮಾಣ ಕೈಗೊಂಡ ಈ ಜಾಗಗಳು ದೆಹಲಿ ವಿಕಾಸ ಪ್ರಾಧಿಕಾರ, ದೆಹಲಿ ನಗರ ನಿಗಮ, ದೆಹಲಿ ಜಲ ಬೋರ್ಡ್ ಹಾಗೂ ಅನ್ಯ ಸರ್ಕಾರಿ ಏಜೆನ್ಸಿಗಳಿಗೆ ಒಳಪಟ್ಟಿವೆ ಎಂದಿದ್ದರು.
ಈ ಇಬ್ಬರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗ ಠಾಕೂರ್ ಹಾಗೂ ವರ್ಮಾ ಅವರ ಪ್ರಚಾರದ ಮೇಲೆ ಕ್ರಮೇಣವಾಗಿ 72ಗಂಟೆ ಹಾಗೂ 96ಗಂಟೆ ನಿಷೇಧ ವಿಧಿಸಿತ್ತು.
PFI ಹಾಗೂ ಶಾಹೀನ್ ಬಾಗ್ ಲಿಂಕ್ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ, "PFI ಕುರಿತು ತಮಗೆ ಕೆಲ ತನಿಖಾ ಸಂಸ್ಥೆಗಳಿಂದ ವರದಿ ಬಂದಿದ್ದು, ತಮ್ಮ ಸಚಿವಾಲಯ ಈ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆಯ ವರದಿಯನ್ನು ಆಧರಿಸಿ ಕ್ರಮಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ನಾನು 3 ದಿನಗಳ ಒಳಗೆ ಸಮಯ ನೀಡಲಿದ್ದು, ಈ ಸಮಯದಲ್ಲಿ ಯಾರು ಬೇಕಾದರೂ ನನ್ನ ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆ (CAA)ಗೆ ಸಂಬಂಧಿಸದಂತೆ ಚರ್ಚೆ ನಡೆಸಬಹುದಾಗಿದೆ" ಎಂದು ಶಾ ಹೇಳಿದ್ದಾರೆ.