ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುವವರು ಮರೆತೂ ಈ ತಪ್ಪನ್ನು ಮಾಡದಿರಿ!
ಬಂಧಿತ ಆರೋಪಿಗಳನ್ನು ಹರಿಯಾಣದ ಪಂಚಕುಲ ನಿವಾಸಿಯಾದ ದಿನೇಶ್ ಮತ್ತು ಕವಿತಾ ಎಂದು ಗುರುತಿಸಲಾಗಿದೆ.
ನವದೆಹಲಿ: ರೈಲಿನಲ್ಲಿ ಪ್ರಯಾಣಿಸಲೆಂದು ಹೊರಟಿದ್ದ ಮಹಿಳೆಯಿಂದ ಎರಡು ತಿಂಗಳ ಮಗುವನ್ನು ಅಪಹರಿಸಿ ಪರಾರಿಯಾಗುತ್ತಿದ್ದ ಘಟನೆ ಇತ್ತೀಚಿಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ವಾಸ್ತವವಾಗಿ ಮಗು ಅಪಹರಿಸಿದ್ದ ಹರಿಯಾಣದ ಈ ದಂಪತಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವರು ಎರಡು ತಿಂಗಳ ಮುಗ್ಧ ಮಗುವನ್ನು ಅಪಹರಿಸಿದ್ದಾರೆ. ಅದರ ನಂತರ, ಅವರು ಮಗುವಿನೊಂದಿಗೆ ಪರಾರಿಯಾಗಲು ಹೊರಟಿದ್ದರು. ಅವರು ಅಲ್ಲಿಂದ ಮಗುವನ್ನು ಗೋವಾಗೆ ಹೋಗುವವರಿದ್ದರು ಎಂದು ತಿಳಿದುಬಂದಿದೆ. ಆದರೆ ಅದೃಷ್ಟವಶಾತ್ ಇದಕ್ಕೂ ಮೊದಲು ಪೊಲೀಸರು ದಂಪತಿಯನ್ನು ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಬಂಧಿಸಿ ಮಗುವನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಹರಿಯಾಣದ ಪಂಚಕುಲ ನಿವಾಸಿಯಾದ ದಿನೇಶ್ ಮತ್ತು ಕವಿತಾ ಎಂದು ಗುರುತಿಸಲಾಗಿದೆ.
ಡಿಸಿಪಿ (ರೈಲ್ವೆ) ಹರೇಂದ್ರ ಕುಮಾರ್ ಸಿಂಗ್ ಅವರ ಪ್ರಕಾರ, ಮಹಿಳೆಯೊಬ್ಬರು ಹಜರತ್ ನಿಜಾಮುದ್ದೀನ್ ಪೊಲೀಸರಿಗೆ ಡಿಸೆಂಬರ್ 25 ರಂದು ದೂರು ನೀಡಿದ್ದಾರೆ. ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ನಿವಾಸಿಯಾಗಿದ್ದ ಮಹಿಳೆಯೊಬ್ಬರು ಅವರ ಗ್ರಾಮದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪತಿ ಇಲ್ಲದೆ ಒಬ್ಬರೇ ಎರಡು ತಿಂಗಳ ಮಗು ಮತ್ತು ತಮ್ಮ ಮಗಳ ಜೊತೆ ಹೊರಟಿದ್ದರು. ಆಕೆಯ ಪತಿ ಕೆಲಸ ಮುಗಿಸಿಕೊಂಡು ಬರುವವರಿದ್ದರು. ಆಕೆ ರೈಲು ನಿಲ್ದಾಣದಲ್ಲಿ ಮಹಾಕೌಶಲ್ ಎಕ್ಸ್‌ಪ್ರೆಸ್ ರೈಲಿನ ನಿರೀಕ್ಷೆಯಲ್ಲಿದ್ದರು. ಈ ವೇಳೆ ಬಂದ ಮಹಿಳೆಯೊಬ್ಬಳು ಆ ರೈಲು ಬೇರೆ ಪ್ಲಾಟ್ಫಾರ್ಮ್ ನಲ್ಲಿ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಬಳಿ ಮಡಿಲಲ್ಲಿ ಒಂದು ಮಗು, ಇದಲ್ಲದೆ 5-6 ವರ್ಷದ ಮಗಳು ಮತ್ತು ಸಾಕಷ್ಟು ಲಗೇಜ್ ಕೂಡ ಇತ್ತು ಎನ್ನಲಾಗಿದೆ. ಹೀಗಾಗಿ ಮಹಿಳೆ ತನಗೆ ಸಹಾಯ ಮಾಡುವಂತೆ ಆ ಮಹಿಳೆಯನ್ನು ಕೇಳಿದ್ದಾಳೆ. ತನ್ನ ಕೈಯಲ್ಲಿದ್ದ ಎರಡು ತಿಂಗಳ ಮಗುವನ್ನು ಆಕೆಗೆ ಕೊಟ್ಟು, ತಾನು ಸಾಮಾನನ್ನು ರೈಲು ಬರಲಿರುವ ಪ್ಲಾಟ್ಫಾಮ್ ನಲ್ಲಿ ಇಟ್ಟು ಬರುತ್ತೇನೆ. ಅಲ್ಲಿವರೆಗೆ ಮಗುವನ್ನು ನೋಡಿಕೊಳ್ಳಿ ಎಂದಿದ್ದಾರೆ. ಆದರೆ ಮಹಿಳೆ ಹಿಂದಿರುಗಿ ಬರುವಷ್ಟರಲ್ಲಿ ಮಗು ನೋಡಿಕೊಳ್ಳುತ್ತಿದ್ದ ಮಹಿಳೆ ಮಗು ಜೊತೆಗೆ ಪರಾರಿಯಾಗಿದ್ದಾರೆ.
ಇದರಿಂದ ಗಾಬರಿಗೊಂಡ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಎಸ್‌ಎಚ್‌ಒ ಪ್ರವೀಣ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ಮಾಡಿ ಮಹಿಳೆಯನ್ನು ಶಂಕಿಸಿದ್ದಾರೆ. ಗೋವಾಕ್ಕೆ ಹೋಗಲು ರೈಲು ಹಿಡಿಯಲು ಇಬ್ಬರು ಬಂದಿದ್ದಾಗ ಪೊಲೀಸರು ಕವಿತಾ ಮತ್ತು ದಿನೇಶ್ ಅವರನ್ನು ತಾಂತ್ರಿಕ ಕಣ್ಗಾವಲು ಮೂಲಕ ಬುಧವಾರ ಬಂಧಿಸಿದ್ದಾರೆ.