ಮುಂಬೈ: ಮುಂಬೈಗೆ ತೆರಳುತ್ತಿದ್ದ ತೇಜಸ್ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದ ಘಟನೆ ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. 


COMMERCIAL BREAK
SCROLL TO CONTINUE READING

ಮೂವರು ಕಾರ್ಮಿಕರೂ ಒಪ್ಪಂದದ ಮೇರೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎನ್ನಲಾಗಿದೆ. ಇವರು ರಾಯ್ಗಡ್ ಜಿಲ್ಲೆಯ ಪೆನ್ ಪ್ರದೇಶದ ಜೈಟ್ ರೈಲ್ವೆ ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


ಮೃತರನ್ನು ಅಶೋಕ್ ಬಾರಿ (30), ನಿಮ್ಸಿಂಗ್ ಗುಲ್ಕರ್ (40) ಮತ್ತು ಅಜಯ್ ದಾಂಡೋಡಿಯ(18) ಎಂದು ಗುರುತಿಸಲಾಗಿದ್ದು, ಎಲ್ಲರೂ ಮಧ್ಯಪ್ರದೇಶ ಮೂಲದವರು ಎಂದು ತಿಳಿದುಬಂದಿದೆ. ರಾಯಘಡದ ದಾದರ್ ಸಾಗಾರಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ವರದಿ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.


ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಗೋವಾದ ಕರ್ಮಲಿ ನಿಲ್ದಾಣ ನಡುವೆ ಚಲಿಸುವ ತೇಜಸ್ ಎಕ್ಸ್ ಪ್ರೆಸ್ ಸಂಪೂರ್ಣ ಹವಾನಿಯಂತ್ರ ರೈಲಾಗಿದೆ. ಅಧಿಕೃತ ವರದಿಯ ಪ್ರಕಾರ, 2015 ರಿಂದ 2017ರ ಅವಧಿಯಲ್ಲಿ ಸುಮಾರು 50,000 ಮಂದಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.