ಶಾಲಾ ಕಟ್ಟಡದಲ್ಲಿ ಅಗ್ನಿ ಅನಾಹುತ; ಇಬ್ಬರು ಮಕ್ಕಳು ಸೇರಿ ಮೂವರು ಸಾವು
ಫರೀದಾಬಾದಿನ ದುಬುವಾ ಕಾಲೋನಿಯಲ್ಲಿರುವ ಖಾಸಗಿ ಶಾಲೆಯ ನೆಲಮಹಡಿಯಲ್ಲಿದ್ದ ಬಟ್ಟೆ ಗೋದಾಮಿನಲ್ಲಿ ಶನಿವಾರ ಬೆಳಿಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಶಾಲೆಗೂ ಆವರಿಸಿದೆ ಎನ್ನಲಾಗಿದೆ.
ಫರೀದಾಬಾದ್: ಹರಿಯಾಣದ ಫರಿದಾಬಾದ್ನಲ್ಲಿ ಖಾಸಗಿ ಶಾಲೆಯೊಂದರಲ್ಲಿ ಶನಿವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಮತ್ತು ಓರ್ವ ಶಿಕ್ಷಕಿ ಮೃತಪಟ್ಟಿದ್ದಾರೆ.
ಗುಜರಾತಿನ ಸೂರತ್ ನಲ್ಲಿನ ಕೋಚಿಂಗ್ ಸೆಂಟರ್'ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.
ಫರೀದಾಬಾದಿನ ದುಬುವಾ ಕಾಲೋನಿಯಲ್ಲಿರುವ ಖಾಸಗಿ ಶಾಲೆಯ ನೆಲಮಹಡಿಯಲ್ಲಿದ್ದ ಬಟ್ಟೆ ಗೋದಾಮಿನಲ್ಲಿ ಶನಿವಾರ ಬೆಳಿಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಶಾಲೆಗೂ ಆವರಿಸಿದೆ ಎನ್ನಲಾಗಿದೆ. ಸೂರತ್ ಘಟನೆಯಂತೆಯೇ ಇಲ್ಲಿಯೂ ಕೂಡ ಅಗ್ನಿಶಾಮಕ ಸಿಬ್ಬಂದಿ ತಡವಾಗಿ ಆಗಮಿಸಿದ ಕಾರಣ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸ್ಥಳಿಯರು ದೂರಿದ್ದಾರೆ.
ಘಟನೆಯಲ್ಲಿ ಶಿಕ್ಷಕಿ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತೀವ್ರ ಸುಟ್ಟಗಾಯಗಳಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಅನಾಹುತಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.