ಕುಪ್ವಾರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ಭಾರೀ ಹಿಮಪಾತ ಸಂಭವಿಸಿದ್ದು, ಭಾರತೀಯ ಸೇನೆಯ ಕನಿಷ್ಠ ಮೂವರು ಯೋಧರು ನಾಪತ್ತೆಯಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಬುಧವಾರ (ಡಿಸೆಂಬರ್ 3) ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಕಾಣೆಯಾದ ಯೋಧರನ್ನು ಹುಡುಕಲು ಸೇನೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಕಾಣೆಯಾಗಿರುವ ಮೂವರು ಯೋಧರಲ್ಲದೆ ಹಿಮಪಾತ(Avalanche)ಕ್ಕೆ ಸಿಲುಕಿದ್ದ ಇತರ ಜವಾನರನ್ನು ಭದ್ರತಾ ಪಡೆಗಳು ರಕ್ಷಿಸಿವೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್‌ನಲ್ಲಿ ಹಿಮಪಾತವು ಸೇನೆಯ ಪೋಸ್ಟ್ ಮೇಲೆ ಬಂದೆರಗಿದ್ದು, ಈ ವೇಳೆ ಕೆಲ ಜವಾನರು ಮಂಜುಗಡ್ಡೆಯ ಕೆಳಗೆ ಸಿಲುಕಿಕೊಂಡಿದ್ದಾರೆ. ಭಾರೀ ಹಿಮಪಾತಕ್ಕೆ ಸಿಲುಕಿದ್ದ ಜವಾನರನ್ನು ರಕ್ಷಿಸಲು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ವರದಿಯಾಗಿದೆ.


ನವೆಂಬರ್ 30 ರ ಬೆಳಗ್ಗೆ ಕೂಡ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ದಕ್ಷಿಣ ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಿಂದ ಸೇನೆಯ ಗಸ್ತು ತಂಡದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ದುರಂತ ಸಂಭವಿಸಿದಾಗ ಸೇನೆಯ ಗಸ್ತು ತಂಡವು ದಕ್ಷಿಣ ಸಿಯಾಚಿನ್ ಹಿಮನದಿಯ 18,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸುತ್ತಿತ್ತು.


ಅವಲಾಂಚೆ ರಕ್ಷಣಾ ತಂಡದ ಸದಸ್ಯರನ್ನು ಕೂಡಲೇ ಸ್ಥಳಕ್ಕೆ ಕರೆದೊಯ್ಯಲಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಸೇನಾ ಹೆಲಿಕಾಪ್ಟರ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಧಾವಿಸಿದ ಪಾರುಗಾಣಿಕಾ ತಂಡವು ದಟ್ಟ ಹಿಮದ ಪದರದೊಳಗೆ ಸಿಲುಕಿದ್ದವರನ್ನು ಹೊರತೆಗೆದಿದೆ.


ಆದಾಗ್ಯೂ, ಈ ಘಟನೆಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಹಿಮಪಾತಕ್ಕೆ ಬಲಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ರಕ್ಷಿಸಿದವರನ್ನು ನಂತರ ಹೆಲಿಕಾಪ್ಟರ್‌ಗಳ ಮೂಲಕ ಚಿಕಿತ್ಸೆಗಾಗಿ ಸೈನ್ಯದ ಮೂಲ ಶಿಬಿರಕ್ಕೆ ಕರೆದೊಯ್ಯಲಾಯಿತು.