ಜಮ್ಮು-ಕಾಶ್ಮೀರದಲ್ಲಿ ಎನ್`ಕೌಂಟರ್: 3 ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಫತೇ ಕಡಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ದಾಳಿ ನಡೆದಿದೆ.
ಜಮ್ಮು : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಫತೇ ಕಡಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಪ್ರದೇಶದ ಕೆಲವು ಭಾಗಗಳಲ್ಲಿ ಹಾರ್ಡ್ಕೋರ್ ಭಯೋತ್ಪಾದಕರು ಅಡಗಿ ಕುಳಿತಿರುವ ಬಗ್ಗೆ ಗುಪ್ತಚರರಿಂದ ನಿಖರ ಮಾಹಿತಿ ಪಡೆದ ಬಳಿಕ ಭಾರತೀಯ ಸೇನಾಪಡೆ ಹಾಗೂ ಸಿಆರ್ಪಿಎಫ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಕೂಡಲೇ ಸ್ಥಳವನ್ನು ಸುತ್ತವರೆದ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಲು ಆರಂಭಿಸಿದ್ದಾರೆ.
ಈ ಪ್ರದೇಶದಲ್ಲಿ ಎಲ್ಇಟಿ (ಲಷ್ಕರ್-ಇ-ತೊಯ್ಬಾ)ಉಗ್ರ ಸಂಘಟನೆಯ ಕಮಾಂಡರ್ ಆಗಿರುವುದಾಗಿ ಕೆಲವು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಭದ್ರತಾ ಪಡೆಗಳು ಮತ್ತು ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ, ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಲಾಗಿದೆ.