ಸವಾಯಿ ಮಾಧೋಪುರ್: ವನ್ಯಜೀವಿಗಳ ಸಫಾರಿ ಸಂದರ್ಭದಲ್ಲಿ ಹುಲಿಯನ್ನು ನೋಡುವುದು ಹೆಚ್ಚಿನ ಪ್ರವಾಸಿಗರಿಗೆ ಸ್ಮರಣೀಯ ಅನುಭವವಾಗಬಹುದು. ಆದರೆ, ರಾಜಸ್ಥಾನದಲ್ಲಿ ಕೆಲ ಪ್ರವಾಸಿಗರಿಗೆ ಈ ಅನುಭವ ಆಘಾತವನ್ನು ನೀಡಿದೆ. ಹೌದು, ಇಲ್ಲಿನ ಸವಾಯಿ ಮಾಧೋಪುರ್ ನ ರಣಥಂಬೋರ್ ರಾಷ್ಟ್ರೀಯ ಉದ್ಯಾನ ವನದಲ್ಲಿ ಭಾನುವಾರ ಘಟನೆಯೊಂದು ಸಂಭವಿಸಿದ್ದು, ಘಟನೆಯಲ್ಲಿ ಹುಲಿಯೊಂದು ಪ್ರವಾಸಿಗರ ವಾಹನವನ್ನು ಬೆನ್ನಟ್ಟಿದೆ. ಸದ್ಯ ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಸುಮಾರು 19 ಸೆಕೆಂಡ್ ಗಳ ಈ ವಿಡಿಯೋ ಕ್ಲಿಪ್ ನಲ್ಲಿ ಹುಲಿ ಪ್ರವಾಸಿಗರ ವಾಹನವನ್ನು ಬೆನ್ನಟ್ಟುತ್ತಿರುವುದನ್ನು ಗಮನಿಸಬಹುದಾಗಿದೆ. ಹುಲಿಯಿಂದ ಪಾರಾಗಲು ವಾಹನ ಚಾಲಕ ತನ್ನ ಜೀಪ್ ನ ವೇಗವನ್ನು ಹೆಚ್ಚಿಸಿದರೂ ಕೂಡ, ಜೀಪ್ ವೇಗಕ್ಕೆ ತಕ್ಕಂತೆ ಹೆಜ್ಜೆಹಾಕಿ ವಾನನವನ್ನು ಬೆನ್ನಟ್ಟಿದೆ. ಕೊನೆಗೆ ಚಾಲಕ ತನ್ನ ವಾಹನವನ್ನು ಹಿಮ್ಮುಖವಾಗಿ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸಿದಾಗ ಹುಲಿ ಮಾಯವಾದಂತೆ ಕಂಡು ಬಂದಿದೆ.



ಈ ಸುದ್ದಿಯನ್ನು ANI ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಲವಾರು ಜನರು ಘಟನೆಯ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಸೋಮವಾರ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಗೆ ಹರಿಬಿಡಲಾಗಿದ್ದು, ಇದುವರೆಗೆ 14,000 ಬಾರಿ ವೀಕ್ಷಣೆಗೆ ಒಳಗಾಗಿದೆ.


ಕಳೆದ ತಿಂಗಳು ಮಹಾರಾಷ್ಟ್ರದ ತಡೋಬಾ-ಅಂಧಾರಿ ಟೈಗರ್ ರಿಸರ್ವ್ ನಲ್ಲಿ ಇದೇ ರೀತಿ ಹುಲಿಯೊಂದು ಪ್ರವಾಸಿಗರ ವಾಹನವನ್ನು ಬೆನ್ನಟ್ಟಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬಳಿಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು, ಚಾಲಕರು ಹಾಗೂ ಪ್ರವಾಸಿಗರಿಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಹುಲಿಗಳಿಂದ ಸುಮಾರು 50 ಮೀಟರ್ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರು.