ನವದೆಹಲಿ: ಸಿಬಿಐನ ಅಧಿಕಾರಿಗಳ ತಂಡವು ಮಂಗಳವಾರ ತಡರಾತ್ರಿ ಚಿದಂಬರಂನ  ಜೋರ್ ಬಾಗ್ ನಿವಾಸಕ್ಕೆ ಬಂದಾಗ ಅವರು ಮನೆಯಲ್ಲಿ ಸಿಗಲಿಲ್ಲ. ಈ ಹಿನ್ನಲೆಯಲ್ಲಿ ಸಿಬಿಐ ಅಧಿಕಾರಿಗಳು ಅವರಿಗೆ ನೋಟಿಸ್ ನೀಡಿ ಮುಂದಿನ ಎರಡು ಗಂಟೆಗಳಲ್ಲಿ ಹಾಜರಾಗಲು ಕೇಳಿಕೊಂಡಿದ್ದಾರೆ. ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರ ಎರಡೂ ಜಾಮೀನು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿತ್ತು. 


COMMERCIAL BREAK
SCROLL TO CONTINUE READING

ಬಂಧನ ಭೀತಿಯಲ್ಲಿರುವ  ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಸಂಬಂಧಿಸಿ​ ಬುಧವಾರ ನಡೆದ ಬೆಳವಣಿಗೆಗಳ ಟೈಮ್ ಲೈನ್ ಹೀಗಿದೆ.


07:40 AM: ಪಿ.ಚಿದಂಬರಂ ಅವರನ್ನು ಬಂಧಿಸಲು ಕೆಂದ್ರೀಯ ತನಿಖಾ ತಂಡ ಚಿದಂಬರಂ ನಿವಾಸಕ್ಕೆ ಆಗಮನ.


08:10 AM: ಹಿರಿಯ ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್​ ಟ್ವೀಟ್​ ಮಾಡಿ ಸಿಬಿಐ ಕ್ರಮವನ್ನು ಖಂಡಿಸಿ, ಇದು ರಾಜಕೀಯ ದ್ವೇಷವಲ್ಲದೇ ಬೇರೆನೂ ಅಲ್ಲ ಎಂದು ಟೀಕೆ.



08:30 AM: ಪಿ.ಚಿದಂಬರಂಗೆ ಬೆಂಬಲ ಸೂಚಿಸಿ ಟ್ವೀಟ್​ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ನಿಜ ಹೇಳಿದ್ದಕ್ಕೆ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ.



09:30 AM: ಚಿದಂಬರಂ ಪ್ರಕಣದ ಬಗ್ಗೆ ಟ್ವೀಟ್​ ಮಾಡಿದ ಕಾಂಗ್ರೆಸ್​ ಪಕ್ಷದ ವಕ್ತಾರ ರಣದೀಪ್​ ಸುರ್ಜೆವಾಲಾ, ಮೋದಿ ಸರ್ಕಾರದಿಂದ ಭಾರತವು ಅತ್ಯಂತ ಕೆಟ್ಟ ರೀತಿಯ ಕಡುಹಗೆತನಕ್ಕೆ ಸಾಕ್ಷಿಯಾಗಿದೆ. ಸರ್ಕಾರ ಪೊಲೀಸ್​ ರಾಜ್ಯವನ್ನು ನಡೆಸುತ್ತಿದೆ. ನ್ಯಾಯಮೂರ್ತಿಗಳು ತೀರ್ಪನ್ನು ಏಳು ತಿಂಗಳುಗಳ ಕಾಲ ಕಾಯ್ದಿರಿಸಿ ನಿವೃತ್ತಿಗೆ 72 ಗಂಟೆ ಇರುವಾಗ ಆದೇಶ ಹೊರಡಿಸುತ್ತಾರೆ. ಗೌರವಾನ್ವಿತ ಮಾಜಿ ವಿತ್ತ ಸಚಿವರ ಮೇಲೆ ದಾಳಿ ಮಾಡಲು ಸಿಬಿಐ ಮತ್ತು ಇಡಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆಕ್ಷೇಪ.


10:15 AM: ಮಂಗಳವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್​ ಆದೇಶದಿಂದ ಕೊಂಚ ವಿರಾಮ ಪಡೆದುಕೊಳ್ಳಲು ಪಿ.ಚಿದಂಬರಂ ಪರ ವಕೀಲರಿಂದ ಸುಪ್ರೀಂಕೋರ್ಟ್​ಗೆ ವಿಶೇಷ ರಜಾ ಅರ್ಜಿ ಸಲ್ಲಿಕೆ. ಅರ್ಜಿದಾರನು ನ್ಯಾಯಾಲಯದಿಂದ ಪಲಾಯನ ಮಾಡುವ ಸಾಧ್ಯತೆಯಿದೆ ಅಥವಾ ಸಾಕ್ಷಿಗಳ ಮೇಲೆ ಅರ್ಜಿದಾರ ಪ್ರಭಾವ ಬೀರಬಹುದೆಂಬುದು ಮತ್ತು ಸಾಕ್ಷ್ಯಾ ನಾಶಕ್ಕೆ ಯತ್ನಿಸಬಹುದು ಎಂಬ ಆಧಾರದ ಮೇಲೆ ದೆಹಲಿ ಹೈಕೋರ್ಟಿನಿಂದ ನಿರೀಕ್ಷಣಾ ಜಾಮೀನು ನಿರಾಕರಣೆ, ಜಾಮೀನು ನಿರಾಕರಿಸುವ ಈ ಮೂರು ಆಧಾರಗಳು ಸುಳ್ಳು ಎಂದು ಅರ್ಜಿಯಲ್ಲಿ ಉಲ್ಲೇಖ.


10:30 AM: ಪಿ. ಚಿದಂಬರಂ ಪರ ವಾದ ಮಾಡಲು ಹಿರಿಯ ವಕೀಲರಾದ ಕಪಿಲ್​ ಸಿಬಲ್​, ಸಲ್ಮಾನ್​ ಖುರ್ಷಿದ್​ ಮತ್ತು ವಿವೇಕ್​ ಟಂಖ ಅವರು ನ್ಯಾಯಾಲಯಕ್ಕೆ ಆಗಮನ.


10:42 AM: ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಪಿ. ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠಕ್ಕೆ ಕಳುಹಿಸಿದರು.


11:26 AM: ಕಾಂಗ್ರೆಸ್​ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವಿರುದ್ಧ ಲುಕೌಟ್​ ನೋಟಿಸ್​ ಜಾರಿ ಮಾಡಿದ ಜಾರಿ ನಿರ್ದೇಶನಾಲಯ.


11:36 AM: ಹಿರಿಯ ರಾಜಕಾರಣಿ ಪಿ. ಚಿದಂಬರಂ ಅವರನ್ನು ಮೋದಿ ಸರ್ಕಾರ ಕಳ್ಳನಂತೆ ನೋಡಿಕೊಳ್ಳುತ್ತಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಆರೋಪಿಸಿದ್ದಾರೆ.



12:46 PM: ಬಂಧನದಿಂದ ರಕ್ಷಣೆ ಕೋರಿ ಚಿದಂಬರಂ ಅವರ ಮನವಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತಮ್ಮ ವಾದಗಳನ್ನು ಆಲಿಸುವಂತೆ ಕೋರಿ ಸಿಬಿಐ ವತಿಯಿನ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಕೆ.


1:06 PM: ಪಿ. ಚಿದಂಬರಂ ಬೆಂಬಲಿಸಿ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್: ಕೇಂದ್ರ ಸರ್ಕಾರ  ಜಾರಿ ನಿರ್ದೇಶನಾಲಯ ಮತ್ತು ಸಿಬಿಐಯನ್ನು ಮಾಜಿ ಹಣಕಾಸು ಸಚಿವರನ್ನು "ತೇಜೋವಧೆ" ಮಾಡಲು ಬಳಸುತ್ತಿದ್ದಾರೆ ಎಂದು ಆರೋಪಿಸಿದರು. "ಈ ನಾಚಿಕೆಗೇಡಿನ ಅಧಿಕಾರ ದುರುಪಯೋಗವನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದು ಅವರು ಟ್ವೀಟ್ ನಲ್ಲಿ ಬರೆದಿದ್ದಾರೆ.