ಮತ ಎಣಿಗೂ ಮುನ್ನ ವಿವಿಪ್ಯಾಟ್ ಪರಿಶೀಲಿಸಿ: ಚುನಾವಣಾ ಆಯೋಗಕ್ಕೆ ಟಿಎಂಸಿ ಮನವಿ
22 ವಿರೋಧ ಪಕ್ಷಗಳು ಉನ್ನತ ಚುನಾವಣಾ ಆಯೋಗದ ಅಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಿ VVPAT ಸ್ಲಿಪ್ಸ್ ಗಳನ್ನು ಮೊದಲು ಎಣಿಕೆ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದವು.
ಪಶ್ಚಿಮ ಬಂಗಾಳ: ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮೊದಲು ವಿವಿಪ್ಯಾಟ್ ಪರಿಶೀಲಿಸಿ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ದಿನೇಶ್ ತ್ರಿವೇದಿ ಮತ್ತೊಮ್ಮೆ ಭಾರತದ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಇವಿಎಂ ಮತ ಎಣಿಕೆಗೂ ಮೊದಲು ವಿವಿಪ್ಯಾಟ್ ಪರಿಶೀಲಿಸುವುದರಿಂದ ಏನು ಹಾನಿಯಾಗಲಿದೆ ಎಂದು ಪ್ರಶ್ನಿಸಿರುವ ತ್ರಿವೇದಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಧಾರವನ್ನು ತಿಳಿಯಲು ಮತ್ತು ಅನುಮಾನಗಳನ್ನು ತೊಡೆದುಹಾಕಲು ಚುನಾವಣಾ ಆಯೋಗವು ಮತ ಎಣಿಕೆಗೂ ಮೊದಲು ವಿವಿಪ್ಯಾಟ್ ಪರಿಶೀಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮೊದಲು ವಿವಿಪ್ಯಾಟ್ ಪರಿಶೀಲಿಸುವಂತೆ ಕೋರಿರುವ ವಿರೋಧ ಪಕ್ಷಗಳ ತಾರ್ಕಿಕ ಬೇಡಿಯನ್ನು ಚುನಾವಣಾ ಆಯೋಗ ಏಕೆ ಗಮನಿಸುತ್ತಿಲ್ಲ. ಇದಕ್ಕೆ ಒಂದು ಒಳ್ಳೆಯ ಕಾರಣವನ್ನು ನೀಡಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸೇರಿದಂತೆ ಮಂಗಳವಾರ ಸಭೆ ಸೇರಿದ್ದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಆಮ್ ಆದ್ಮಿ, ಸಿಪಿಐ-ಸಿಪಿಐಎಂ, ಡಿಎಂಕೆ, ಎನ್ಸಿಪಿ ಸೇರಿದಂತೆ 22 ಪ್ರತಿಪಕ್ಷಗಳ ನಾಯಕರು ಮತ ಎಣಿಕೆಗೂ ಮುನ್ನ ವಿವಿಪ್ಯಾಟ್‌ಗಳ ಪರಿಶೀಲನೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಬುಧವಾರ ಸಭೆ ನಡೆಸುವುದಾಗಿ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.