ಜಾರ್ಖಂಡ್, ಅಸ್ಸಾಂ ರಾಜ್ಯಗಳಲ್ಲಿಯೂ ಟಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ: ಮಮತಾ ಬ್ಯಾನರ್ಜಿ
ಹಿಂಸಾಚಾರವನ್ನು ಪ್ರಚೋದಿಸಿ ರಾಷ್ಟ್ರವನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
ಜಮುರಿಯಾ: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ನೆರೆಯ ರಾಜ್ಯಗಳಾದ ಜಾರ್ಖಂಡ್ ಮತ್ತು ಅಸ್ಸಾಂನಲ್ಲಿಯೂ ಟಿಎಂಸಿ ಪಕ್ಷ ಸ್ಪರ್ಧಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, "ಕೇಸರಿ ಪಕ್ಷದ ದಾಳಿಯಿಂದ ಜನರನ್ನು ರಕ್ಷಿಸಲು ನಮ್ಮ ಪಕ್ಷ ನೆರೆಯ ರಾಜ್ಯಗಳ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಾರ್ಖಂಡ್ನಲ್ಲಿಯೂ ನಾವು ಸ್ಪರ್ಧಿಸಲಿದ್ದೇವೆ. ಹಾಗೆಯೇ ಅಸ್ಸಾಂ ಮತ್ತು ಒಡಿಶಾದಲ್ಲಿಯೂ ಟಿಎಂಸಿ ಚುನಾವಣೆ ಎದುರಿಸಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, "ಬಿಜೆಪಿ ಜನರನ್ನು ಧರ್ಮದ ಆಧಾರದ ಮೇಲೆ ವಿಗಂಡಿಸಲು ಪ್ರಯತ್ನಿಸುತ್ತಿದೆ. ಹಿಂಸಾಚಾರವನ್ನು ಪ್ರಚೋದಿಸಿ ರಾಷ್ಟ್ರವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಆದರೆ ದೇಶದ ಜನತೆ ಬಿಜೆಪಿಯ ಇಂತಹ ರಾಜಕೀಯ ತಂತ್ರಗಳಿಗೆ ಎಂದೂ ಬಲಿಯಾಗಬೇಡಿ ಎಂದು ಹೇಳಿದರು.