ನಾಳೆ ಸೋನಿಯಾ ಗಾಂಧಿ,ರಾಹುಲ್ ಭೇಟಿಯಾಗಲಿರುವ ಮಾಯಾವತಿ
ಬಿಎಸ್ಪಿ ನಾಯಕಿ ಮಾಯಾವತಿ ನಾಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ.
ನವದೆಹಲಿ: ಬಿಎಸ್ಪಿ ನಾಯಕಿ ಮಾಯಾವತಿ ನಾಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ.
ಲೋಕಸಭಾ ಚುನಾವಣಾ ರ್ಯಾಲಿ ಯುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಯಾವತಿ, ಈಗ ಏಳನೇ ಹಾಗೂ ಅಂತಿಮ ಹಂತದ ಚುನಾವಣೆ ಮುಗಿದ ನಂತರ ಮೇ 23 ರ ಫಲಿತಾಂಶಕ್ಕೂ ಮುನ್ನ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಚುನಾವಣಾ ಲೆಕ್ಕಾಚಾರದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಮಾಯಾವತಿ ಚುನಾವಣಾ ಪ್ರಚಾರದುದ್ದಕ್ಕೂ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರವನ್ನು ನಡೆಸಿದ್ದರು. ಆದರೆ ಅಮೇಥಿ ಮತ್ತು ರಾಯಬರೇಲಿಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಕಾಂಗ್ರೆಸ್ ಗೆ ಮತಹಾಕಲು ಹೇಳಿತ್ತು. ಮೋದಿಯ ಪ್ರಾಬಲ್ಯಕ್ಕೆ ತಡೆಯನ್ನೋಡ್ದಲು ಈಗ ಕಾಂಗ್ರೆಸ್ ಸೇರಿ ಎಲ್ಲ ಪ್ರಾದೇಶಿಕ ಪಕ್ಷಗಳು ಒಮ್ಮತದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಪ್ರಧಾನಮಂತ್ರಿ ಆಕಾಂಕ್ಷಿಯಾಗಿರುವ ಮಾಯಾವತಿ, ಈಗ ಫಲಿತಾಂಶಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಸೋಮವಾರದಂದು ಭೇಟಿಯಾಗುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ.