ಪಾಕಿಸ್ತಾನದಲ್ಲಿ ರೈಲು ಅಪಘಾತ; ಮೂವರ ದುರ್ಮರಣ, ಹಲವರಿಗೆ ಗಾಯ
ದಕ್ಷಿಣ ಬಂದರು ನಗರವಾದ ಕರಾಚಿಯಿಂದ ಲಾಹೋರ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲೊಂದು ಕ್ರಾಸಿಂಗ್‌ನಲ್ಲಿ ನಿಲ್ಲಿಸಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ, ಸಹಾಯಕ ಚಾಲಕ ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಕರಾಚಿ: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಗುರುವಾರ ಎರಡು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಮೂರು ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ದಕ್ಷಿಣ ಬಂದರು ನಗರವಾದ ಕರಾಚಿಯಿಂದ ಲಾಹೋರ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲೊಂದು ಕ್ರಾಸಿಂಗ್‌ನಲ್ಲಿ ನಿಲ್ಲಿಸಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ, ಸಹಾಯಕ ಚಾಲಕ ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ವಕ್ತಾರ ರಿಯಾಜ್ ಅಬ್ಬಾಸಿ ಎಎಫ್‌ಪಿಗೆ ತಿಳಿಸಿದ್ದಾರೆ.
ರೈಲ್ವೆ ಅಧಿಕಾರಿ ಇಶಾಕ್ ಬಲೂಚ್ ಅವರು ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದು, ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಎಫ್‌ಪಿಗೆ ತಿಳಿಸಿದ್ದಾರೆ. ಈ ಅಪಘಾತವು ಮುಖ್ಯ ರೈಲ್ವೆ ಹಳಿಗಳ ಮೇಲೆ ಸಂಭವಿಸಿದ್ದು, ರೈಲಿನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿರುವ ಕಾರಣ ಕರಾಚಿಯಿಂದ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಬಲೂಚ್ ಹೇಳಿದ್ದಾರೆ.
ರೈಲಿನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಖಾಸಗಿ ಟಿವಿ ಚಾನೆಲ್ ಗೆ ತಿಳಿಸಿದ್ದಾರೆ.