ನವದೆಹಲಿ: ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆಗೆ ಆಧ್ಯತೆ ನಿಡುವ ತ್ರಿವಳಿ ತಲಾಖ್ ವಿದೇಯಕವನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. 


COMMERCIAL BREAK
SCROLL TO CONTINUE READING

ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ತ್ರಿವಳಿ ತಲಾಖ್ ವಿರೋಧಿ ಮಸೂದೆ ಮಂಡನೆ ಬಳಿಕ ನಡೆದ ಬಿರುಸಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಸೂದೆಯನ್ನು ಜಂಟಿ ಸಂಸದೀಯ ಮಂಡಳಿಗೆ ಕಳಿಸಬೇಕು ಎಂದು ಒತ್ತಾಯಿಸಿದರೆ, ಎಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 


ಅಲ್ಲದೆ, ವಿಧೇಯಕ ಬಹಳಷ್ಟು ಸೂಕ್ಷ್ಮ ವಿಷಯವಾಗಿರುವುದರಿಂದ ಜಂಟಿ ಸದನ ಸಮಿತಿ ರಚನೆ ಮಾಡಬೇಕು ಎಂದು ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಒತ್ತಾಯಿಸಿದವು. ಇದ್ಯಾವುದಕ್ಕೂ ಸರ್ಕಾರ ಒಪ್ಪದ ಕಾರಣ ಕಾಂಗ್ರೆಸ್‌ ಮತ್ತು ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಸದಸ್ಯರು ಸದನದಿಂದ ಹೊರನಡೆದರು. 


ಚರ್ಚೆ ವೇಳೆ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕಾರ ಮಾಡಲಾಯಿತು. ವಿಧೇಯಕದ ಪರವಾಗಿ 245 ಮತ ಹಾಗೂ ವಿಧೇಯಕದ ವಿರುದ್ಧವಾಗಿ ಕೇವಲ 11 ಮತ ಬಿದ್ದಿದೆ. 


ತ್ರಿವಳಿ ತಲಾಖ್ ನಿಷೇಧಿಸುವ ಸಂಬಂಧ ಹಿಂದೆಯೇ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ಸಿಗದ ಕಾರಣ ಕಾಯ್ದೆಯಾಗಿ ರೂಪಗೊಂಡಿರಲಿಲ್ಲ. ಆದ್ದರಿಂದ, ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತಂದಿತ್ತು. ಸುಗ್ರಿವಾಜ್ಞೆಗೆ ಎರಡೂ ಸದನಗಳ ಒಪ್ಪಿಗೆ ಬೇಕಾದ ಕಾರಣ ಗುರುವಾರ ಲೋಕಸಭೆಯಲ್ಲಿ ಮಂಡನೆ ಮಾಡಲಾಯಿತು.