ನವದೆಹಲಿ : ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಬಹು ಚರ್ಚಿತ ಹಾಗೂ ಐತಿಹಾಸಿಕ ತ್ರಿವಳಿ ತಲಾಕ್ ಮಸೂದೆ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. 


COMMERCIAL BREAK
SCROLL TO CONTINUE READING

ಆಡಳಿತಾರೂಢ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತವಿರದಿದ್ದರೂ ಪ್ರತಿಪಕ್ಷ ಕಾಂಗ್ರೆಸ್‌ ಈಗಾಗಲೇ ವಿಧೇಯಕಕ್ಕೆ ಷರತ್ತುಬದ್ಧ ಒಪ್ಪಿಗೆ ಸೂಚಿಸಿರುವ ಕಾರಣ ಮೇಲ್ಮನೆಯಲ್ಲೂ ಇದಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆಗಳಿವೆ. ಆದರೂ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರೆ ಬೇರೆ ಪಕ್ಷಗಳ ಬೆಂಬಲ ಪಡೆಯಲು ಬಿಜೆಪಿ ಕಸರತ್ತು ನಡೆಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದೇ ವಿಚಾರವಾಗಿ ಸಂಸತ್‌ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆಗಳಿವೆ.


ಮುಸ್ಲಿಮರಲ್ಲಿ ವಿಚ್ಛೇದನ ನೀಡಲು ಆಚರಣೆಯಲ್ಲಿರುವ ತ್ರಿವಳಿ ತಲಾಕ್‌ ಪದ್ಧತಿಯನ್ನು ದಂಡನಾರ್ಹ ಅಪರಾಧ ಎಂದು ಪರಿಗಣಿಸುವ ಮುಸ್ಲಿ ಮಹಿಳೆಯರ (ಮದುವೆ ಕುರಿತ ಹಕ್ಕುಗಳ ರಕ್ಷಣೆ) ವಿಧೇಯಕವು ರಾಜ್ಯಸಭೆಯಲ್ಲಿ ಮಂಡನೆಯಾಗುವ ಮುನ್ನವ ಅದನ್ನು ಬೆಂಬಲಿಸಬೇಕೇ ಅಥವಾ ಬೇಡವೇ ಎಂಬ ನಿಟ್ಟಿನಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು ಮಂಗಳವಾರ ದಿಲ್ಲಿಯಲ್ಲಿ ಸಭೆ ನಡೆಸಲಿವೆ. 


ಈ ಮಧ್ಯೆ, ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆ ವೇಳೆ ತಮ್ಮ ನಿಲುವು ನಿರ್ಧರಿಸಲು ಕಾಂಗ್ರೆಸ್‌, ಡಿಎಂಕೆ, ತೃಣಮೂಲ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ನಾಯಕರು ಸಭೆ ನಡೆಸಿ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.