ನವದೆಹಲಿ: ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾಗಿರುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದ್ದು, ಮುಸ್ಲಿಂ ಸಹೋದರಿಯರಿಗೆ ನ್ಯಾಯ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಧ್ಯಮ ಯುಗದ ಕ್ರೂರ ಪದ್ದತಿಗೆ ಇಂದು ಅಂತ್ಯಗೊಂಡಿದ್ದು, ಮುಸ್ಲಿಂ ಸಹೋದರಿಯರಿಗೆ ನ್ಯಾಯ ಸಿಕ್ಕಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.


ಇಂದು ಇಡೀ ದೇಶಕ್ಕೆ ಒಂದು ಐತಿಹಾಸಿಕ ದಿನ. ಇಂದು ಲಕ್ಷಾಂತರ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಗೆದ್ದಿದ್ದಾರೆ ಮತ್ತು ಅವರಿಗೆ ಘನತೆಯಿಂದ ಬದುಕುವ ಹಕ್ಕು ದೊರೆತಿದೆ. ಅತ್ಯಂತ ಪ್ರಾಚೀನ ಹಾಗೂ ಮಧ್ಯಯುಗದ ಸಂಸ್ಕೃತಿಯನ್ನು ಇದೀಗ ಸಂಸತ್‌ ಅಮಾನ್ಯಮಾಡಿದೆ.



ತ್ರಿವಳಿ ತಲಾಖ್ ನಿಷೇಧ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ  ಹಾಗೂ ಮಹಿಳೆಯರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗಲಿದೆ. ಮುಸ್ಲಿಂ ಮಹಿಳೆಯರ ವಿರುದ್ಧವಾಗಿದ್ದ ತಪ್ಪು ಸಂಸ್ಕೃತಿ ಇದೀಗ ನಾಶವಾಗಿದೆ.  ಇಂತಹ ಆಚರಣೆಗಳಿಂದ ಸಮಸ್ಯೆಗೆ ಎದುರಾಗಿ, ಜೀವನದಲ್ಲಿ ಹೋರಾಟದ ಹಾದಿ ತುಳಿದ ಮಹಿಳೆಯರಿಗೆ ನನ್ನ ಗೌರವ ಸಮರ್ಪಿಸುತ್ತೇನೆ ಎಂದಿದ್ದಾರೆ.


ಈ ವೇಳೆ ಮಸೂದೆಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ಸಹಕಾರ ನೀಡಿದ ಎಲ್ಲ ಸಂಸದರಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.