ಸ್ವಾತಂತ್ರ್ಯ ಲಭಿಸಿ 71 ವರ್ಷಗಳು ಕಳೆದರೂ ಈ ಗ್ರಾಮಕ್ಕಿಲ್ಲ ವಿದ್ಯುತ್ ಭಾಗ್ಯ!
ಸುಮಾರು 100 ಮನೆಗಳಿರುವ ಬಲರಾಂಪುರ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಲಭ್ಯತೆ ಇದ್ದರೂ ಸಹ ಏಳು ದಶಕಗಳಿಂದ ಇಲ್ಲಿನ ಜನರಿಗೆ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ.
ಬಲರಾಂಪುರ: ಭಾರತಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದರೂ ಸಹ ಛತ್ತೀಸ್ಗಡ ರಾಜ್ಯದ ಬಲರಾಂಪುರ ಜಿಲ್ಲೆಯ ತ್ರಿಶೂಲಿ ಗ್ರಾಮದ ಜನತೆ ಮಾತ್ರ ಕತ್ತಲೆಯಲ್ಲಿಯೇ ಜೀವನ ಸಾಗಿಸುವ ಪರಿಸ್ಥಿತಿ ಇದೆ.
ಸುಮಾರು 100 ಮನೆಗಳಿರುವ ಬಲರಾಂಪುರ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಲಭ್ಯತೆ ಇದ್ದರೂ ಸಹ ಏಳು ದಶಕಗಳಿಂದ ಇಲ್ಲಿನ ಜನರಿಗೆ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ. ಈಗಾಗಲೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
"ನಾನು ಹುಟ್ಟಿದಾಗಿನಿಂದಲೂ ಈ ಗ್ರಾಮದಲ್ಲಿ ವಿದ್ಯುತ್ ಕಂಡಿಲ್ಲ. ಎಲೆಕ್ಷನ್ ಸಂದರ್ಭದಲ್ಲಿ ಮಾತ್ರ ನಾಯಕರು ಬರುತ್ತಾರೆ. ಆದರೆ, ಅವರ್ಯಾರೂ ಗ್ರಾಮದ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ" ಎಂದು 70 ವರ್ಷದ ವೃದ್ಧರೊಬ್ಬರು ಹೇಳಿದ್ದಾರೆ.
"ರಾತ್ರಿ ಹೊತ್ತು ಕರೆಂಟ್ ಇಲ್ಲದ ಕಾರಣ ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಯಾವಾಗ ಏನು ಬಂದು ಕಚ್ಚುತ್ತದೋ ಎಂಬ ಭಯ ಕಾಡುತ್ತದೆ" ಎಂದು ಸ್ಥಳೀಯರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಗ್ರಾಮದ ಮಕ್ಕಳು ವಿದ್ಯುತ್ ಇಲ್ಲದೆ ಲ್ಯಾಂಟರ್ನ್ ಬೆಳಕಿನಲ್ಲಿ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೂ ಸಹ ಸೂಕ್ತ ಸೀಮೆಎಣ್ಣೆ ಸರಬರಾಜಿಲ್ಲ. ಬೆಳಕಿಗೊಸ್ಕರ ಸೌದೆಗಳನ್ನು ಉರಿಸಿ ಆ ಬೆಂಕಿಯ ಬೆಳಕಿನಲ್ಲಿ ಕೆಲಸ ಮಾಡುತ್ತೇವೆ ಎಂದು ಗ್ರಾಮಸ್ಥ ರಾಮೇಶ್ವರ್ ಪಾಲ್ ಹೇಳಿದ್ದಾರಲ್ಲದೆ, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮಕ್ಕೆ ವಿದ್ಯುತ್ ಭಾಗ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.