ಶಬರಿಮಲೆ: ಪ್ರತಿಭಟನಾಕಾರರಿಂದ ವಿಮಾನ ನಿಲ್ದಾಣದಲ್ಲಿ ತೃಪ್ತಿ ದೇಸಾಯಿ ದಿಗ್ಬಂಧನ!
ವಿಮಾನ ನಿಲ್ದಾಣ ಮತ್ತು ಶಬರಿಮಲೆ ದೇವಾಲಯದ ಸುತ್ತ ವ್ಯಾಪಕ ಬಿಗಿ ಬಂದೋಬಸ್ತ್.
ಕೊಚ್ಚಿ: ಕೇರಳ ಸರ್ಕಾರ ಸೂಕ್ತ ಭದ್ರತೆ ನೀಡದಿದ್ದರೂ ಅಯ್ಯಪ್ಪನ ದೇಗುಲ ಪ್ರವೇಶಿಸಿಯೇ ಸಿದ್ಧ ಎಂದು ಹೇಳಿದ್ದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ದೇಗುಲಕ್ಕೆ ತೆರಳುವ ಸಲುವಾಗಿ ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ, ಆದರೆ ವಿಮಾನ ನಿಲ್ದಾಣದ ದ ಹೊರಗೆ ಅವರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೃಪ್ತಿ ದೇಸಾಯಿ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ.
ತೃಪ್ತಿ ದೇಸಾಯಿ ಆಗಮಿಸುತ್ತಿರುವ ಸುದ್ದಿ ತಿಳಿದು ಕೊಚ್ಚಿ ವಿಮಾನ ನಿಲ್ದಾಣದ ಹೊರೆಗೆ ಜಮಾಯಿಸಿದ ಪ್ರತಿಭಟನಾಕಾರರರು, ಆಕೆಯನ್ನು ವಿಮಾನನಿಲ್ದಾಣದಿಂದ ಮುಂದೆ ಬಿಡುವುದಿಲ್ಲ ಎಂದು ಅಬ್ಬರಿಸಿದ್ದು, ಪ್ರತಿಭಟನೆ ಮೂಲಕ ಆಕೆ ನಿಲ್ದಾಣದಿಂದ ಹೊರಬರದಂತೆ ದಿಗ್ಬಂಧನ ಹಾಕಿದ್ದಾರೆ. ಉದ್ವಿಗ್ನ ಸ್ಥಿತಿ ಇರುವ ಕಾರಣ ತೃಪ್ತಿ ದೇಸಾಯಿ ಹೊರಬರಲು ಸಾಧ್ಯವಾಗಿಲ್ಲ. ತೃಪ್ತಿಯನ್ನು ಹೊರ ಬರಲು ಬಿಡುವುದಿಲ್ಲ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಏತನ್ಮಧ್ಯೆ, ತೃಪ್ತಿ ದೇಸಾಯಿ ನಿಲ್ದಾಣದ ಒಳಗೆ ನೆಲದ ಮೇಲೆ ಕುಳಿತು ತಮ್ಮ ಬೆಳಗಿನ ಉಪಾಹಾರ ಸೇವಿಸಿದ್ದಾರೆ.
ಸೆಪ್ಟೆಂಬರ್ 28 ರಂದು ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿದ ನಂತರ ಮೂರನೇ ಬಾರಿಗೆ ಇಂದು ಅಯ್ಯಪ್ಪ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ. ಎರಡು ತಿಂಗಳ ಅವಧಿಯ ವಾರ್ಷಿಕ ಯಾತ್ರಾ 'ಮಂಡಲ ಮಕರವಿಲಕ್ಕು' ನವೆಂಬರ್ 17ರಿಂದ ಆರಂಭವಾಗಲಿದ್ದು, ಇಂದು ಸಂಜೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.